ಗುಡ್ಗಾಂವ್: ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಯೊಬ್ಬನ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಶಾಲೆಯ ಶೌಚಾಲಯದಲ್ಲಿ ಸೊರೆತ ಘಟನೆ ಇಲ್ಲಿನ ರ್ಯಾನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ ಎಂಟು ವರ್ಷದ ಪ್ರದುಮನ್ ಠಾಕೂರ್ ಎಂಬ ಬಾಲಕನ ರಕ್ತಸಿಕ್ತ ಮೃತದೇಹವು ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದು ದೇಹದ ತುಂಬಾ ಗಾಯದ ಕಲೆಗಳಿತ್ತು.
ಶುಕ್ರವಾರದಂದು ಬೆಳಿಗ್ಗೆ 7.30ರ ಸುಮಾರಿಗೆ ಮೃತ ಬಾಲಕನ ತಂದೆ ಆತನನ್ನು ಶಾಲೆಗೆ ಬಿಟ್ಟು ತೆರಳಿದ್ದರು. ಶೌಚಾಲಯದಿಂದ ರಕ್ತದ ಮಡುವಿನಲ್ಲೇ ತೆವಳಿಕೊಂಡು ಹೊರಗೆ ಬರಲು ಪ್ರಯತ್ನಿಸುತ್ತಿದ್ದ ಬಾಲಕನನ್ನು ಕಂಡ ಇನ್ನೊರ್ವ ವಿದ್ಯಾರ್ಥಿ ಕೂಡಲೇ ಈ ವಿಷಯವನ್ನು ಶಿಕ್ಷಕರಿಗೆ ತಿಳಿಸಿದ್ದ.
ಗಾಯಾಳು ಬಾಲಕನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ದಾರಿ ಮಧ್ಯೆ ಆತ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ದೃಢಪಡಿಸಿದ್ದವು.
ಮೃತನ ಸಹಪಾಠಿಗಳು ಹೇಳುವಂತೆ ಆತ ಪ್ರತಿದಿನ ಮುಂಜಾನೆ ಶಾಲೆಗೆ ಬಂದೊಡನೆ ಶೌಚಾಲಯಕ್ಕೆ ತೆರಳುತ್ತಿದ್ದ. ಆದರೆ ಶುಕ್ರವಾರದಂದು ಶೌಚಾಲಯಕ್ಕೆ ತೆರಳಿದ ಆತ ಎಷ್ಟೊತ್ತಾದರೂ ಹೊರಗೆ ಬಂದಿರಲಿಲ್ಲ.
ಮೃತನ ಸಹೋದರಿ ಕೂಡಾ ಅದೇ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಸದ್ಯ ಪೊಲೀಸರು ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಶೌಚಾಲಯ ಬಳಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿರುವ ಶಾಲಾ ಆಡಳಿತವರ್ಗ ಶಾಲೆಯಲ್ಲಿ ಒಟ್ಟಾರೆಯಾಗಿ 16 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಶಾಲಾಡಳಿತ ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದೆ.