ಮುಂಬೈ: ತನ್ನ ಸಂಗೀತದಿಂದ ಇಡೀ ಜಗತ್ತನ್ನೇ ಮೋಡಿ ಮಾಡಿರುವ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಇದು ನನ್ನ ಭಾರತವಲ್ಲ, ನನ್ನ ಭಾರತ ವಿಚಾರವಾದಿ ಮತ್ತು ಕರುಣಾಮಯಿಯಾಗಿರಲು ನಾನು ಬಯಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಮುಂಬೈಯಲ್ಲಿ ನಡೆದ ತಮ್ಮ ಒನ್ ಹಾರ್ಟ್ ಎಂಬ ವಿಶೇಷ ಸಿನಿಮಾದ ಪ್ರೀಮಿಯರ್ ಶೋ ವೇಳೆ ರೆಹಮಾನ್ ಬಳಿ ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಪ್ರಶ್ನಿಸಿದಾಗ ಅವರು ಈ ರೀತಿಯಾಗಿ ಉತ್ತರಿಸಿದರು.
“ಗೌರಿ ಲಂಕೇಶ್ ಹತ್ಯೆಯಿಂದ ಮನಸ್ಸಿಗೆ ಬಹಳ ದುಃಖವಾಗಿದೆ. ಈ ಘಟನೆಗಳು ಭಾರತದಲ್ಲಿ ನಡೆಯಬಾರದು ಎಂದು ನಾನು ಬಯಸುತ್ತೇನೆ. ಅವುಗಳು ಭಾರತದಲ್ಲಿ ನಡೆಯುತ್ತವೆ ಎಂದಾದರೆ ಇದು ನನ್ನ ಭಾರತವಲ್ಲ. ನನ್ನ ಭಾರತ ವಿಚಾರವಂತ ಮತ್ತು ದಯಾಳುವಾಗಿರಬೇಕು ಎಂದು ನಾನು ಬಯಸುತ್ತೇನೆ” ಎಂದು ರೆಹಮಾನ್ ತಿಳಿಸಿದರು.
ಒನ್ ಹಾರ್ಟ್: ದ ಎ ಆರ್ ರೆಹಮಾನ್ ಕಾನ್ಸರ್ಟ್ ಫಿಲ್ಮ್ ರೆಹಮಾನ್ ಮತ್ತವರ ತಂಡ ಉತ್ತರ ಅಮೆರಿಕಾದ 14 ನಗರಗಳಲ್ಲಿ ನಡೆಸಿದ ಸಂಗೀತ ಕಾರ್ಯಕ್ರಮಗಳ ಕುರಿತಾಗಿದೆ. ಜೊತೆಗೆ ಹಲವು ವಿಡಿಯೊ ಸಂದರ್ಶನಗಳು ಮತ್ತು ತಂಡದ ಸದಸ್ಯರು ಅಭ್ಯಾಸ ನಡೆಸುವ ವಿಡಿಯೊ ತುಣುಕುಗಳನ್ನು ಹೊಂದಿದೆ.
ಶುಕ್ರವಾರದಂದು ಈ ಸಿನಿಮಾ ಹಿಂದಿ, ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ.