ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹಂತಕರ ಬಗ್ಗೆ ಸುಳಿವು ನೀಡಿದವರಿಗೆ ರೂ. ಹತ್ತು ಲಕ್ಷ ಬಹುಮಾನ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಪ್ರಕರಣವನ್ನು ಬೇಧಿಸಲು ಪೊಲೀಸರು ಸಾರ್ವಜನಿಕರ ನೆರವನ್ನು ಕೋರಿದ ಬೆನ್ನಿಗೇ ಗೃಹಸಚಿವ ರಾಮಲಿಂಗ ರೆಡ್ಡಿ ಈ ಘೋಷಣೆಯನ್ನು ಮಾಡಿದ್ದಾರೆ.
ತನಿಖೆಯನ್ನು ತೀವ್ರಗೊಳಿಸುವಂತೆ ಮತ್ತು ಹಂತಕರನ್ನು ಆದಷ್ಟು ಬೇಗ ಬಂಧಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ನಾವು ಸಾಕಷ್ಟು ಅಧಿಕಾರಿಗಳನ್ನು ನೀಡಿದ್ದು ಅಗತ್ಯಬಿದ್ದಲ್ಲಿ ಇನ್ನೂ ಹೆಚ್ಚಿನ ಅಧಿಕಾರಿಗಳನ್ನು ನೀಡಲಾಗುವುದು ಎಂದು ರೆಡ್ಡಿ ತಿಳಿಸಿದರು.
“ಹಂತಕರ ಸುಳಿವು ನೀಡಿದವರಿಗೆ ಸರಕಾರ ರೂ. ಹತ್ತು ಲಕ್ಷ ಬಹುಮಾನ ನೀಡಲಿದೆ” ಎಂದು ಗೃಹಸಚಿವರು ಮಾಧ್ಯಮದ ಮುಂದೆ ಘೋಷಿಸಿದರು.
ಬುಧವಾರದಂದು ರಾಜ್ಯ ಸರಕಾರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಲು 21 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಘೋಷಿಸಿತ್ತು. ಈ ತಂಡವನ್ನು ಗುಪ್ತಚರ ಇಲಾಖೆಯ ಐಜಿಪಿ ಬಿಕೆ ಸಿಂಗ್ ಮುನ್ನಡೆಸುತ್ತಿದ್ದಾರೆ.