ಮುಡಿಪು, ಫೆ 07 (DaijiworldNews/AK): ಅಹಿಂದ ಜಿಲ್ಲಾಧ್ಯಕ್ಷ, ಕಾಂಗ್ರೆಸ್ ನ ಹಿರಿಯ ನಾಯಕ, ದಲಿತ ಮುಖಂಡರು, ನರಿಂಗಾನ ಕಂಬಳ ಸಮಿತಿ ಗೌರವ ಸಲಹೆಗಾರ, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪದ್ಮನಾಭ ನರಿಂಗಾನ (77)ಅವರು ಬುಧವಾರ ನಿಧನರಾದರು.

ಪದ್ಮನಾಭ ನರಿಂಗಾನ ಅವರಿಗೆ ಮಂಗಳವಾರ ಸಂಜೆ ಎದೆ ನೋವು ಕಾಣಿಸಿಕೊಂಡು ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಬುಧವಾರ ಮಧ್ಯಾಹ್ನ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ರಾಜಕೀಯ ,ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾಗಿ ತೊಡಗಿಸಿಕೊಂಡಿದ್ಸ ಪದ್ಮನಾಭ ನರಿಂಗಾನ ಅವರು ಸಾಮಾನ್ಯ ಬಡತನದ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಪ್ರಾಮಾಣಿಕತೆ ಮತ್ತು ಪರಿಶ್ರಮದ ಮೂಲಕ ಸಾಧನೆ ಮಾಡಿದ ವ್ಯಕ್ತಿಯಾಗಿದ್ದಾರೆ.
ಎರಡು ಬಾರಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಪಂಚಾಯತ್ ಉಪಾಧ್ಯಕ್ಷರೂ ಆಗಿಯೂ ಕಾರ್ಯನಿರ್ವಹಿಸಿದ್ದರು.ಕೈರಂಗಳ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ , ಸ್ಥಳೀಯ ದೇವಸ್ಥಾನ,ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಮಾಡಿದ್ದರು.ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಲಭಿಸಿತ್ತು.
ಕಮ್ಯೂನಿಸ್ಟ್ ಪಕ್ಷದ ಧುರೀಣರಾಗಿದ್ಸ ಮಹಾಬಲೇಶ್ವರ ಭಟ್ಟರ ಪ್ರೇರಣೆಯಿಂದ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿದ ಪದ್ಮನಾಭರು ಅನೇಕ ವರ್ಷಗಳ ಕಾಲ ಸಿಪಿಐಎಂ ಪಕ್ಷದಲ್ಲಿ ಸಕ್ರಿಯವಾಗಿ ದುಡಿದವರು.ಬಳಿಕ ಕಾಂಗ್ರೆಸ್ ಪಕ್ಷ ಸೇರಿ ಯು.ಟಿ.ಖಾದರ್ ಅವರ ಆಪ್ತರಾಗಿ ಗುರುತಿಸಿದ್ದರು.ಪದ್ಮನಾಭರ ಮಗ ಮೋಹನ್ ಅವರು ಸರಕಾರಿ ವಾಹನ ಚಾಲಕರು.ಯು.ಟಿ.ಖಾದರ್ ಅವರು ಸಚಿವರಾಗಿದ್ದಾಗಲೂ ಅವರಿಗೆ ಚಾಲಕರಾಗಿದ್ದರು. ಈಗ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್ ಅವರ ಕಾರು ಚಾಲಕರಾಗಿ ದುಡಿಯುತ್ತಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಇದ್ದಾರೆ.ಫೆ 8 ಗುರುವಾರ ಬೆಳಿಗ್ಗೆ 10 ಗಂಟೆಗೆ ಪದ್ಮನಾಬರ ನರಿಂಗಾನದ ಸ್ವಗೃಹದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶದ ಬಳಿಕ ಅಂತ್ಯಕ್ರಿಯೆ ನಡೆಯಲಿದೆಯೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪದ್ಮನಾಭ ಅವರ ನಿಧನಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.