ಮಂಡ್ಯ, ನ 17: ಕಳೆದ ನಾಲ್ಕು ದಿನಗಳಿಂದ ವೈದ್ಯರು ಮುಷ್ಕರ ನಡೆಸುತ್ತಿರುವ ಪರಿಣಾಮ ರೋಗಿಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇಲ್ಲೊಬ್ಬ ವೈದ್ಯರು ಮುಷ್ಕರದ ನಡುವೆ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳ ವೈದ್ಯರು ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಸ್ಪತ್ರೆಗೆ ಬಾಗಿಲು ಹಾಕಿದ್ದಾರೆ. ವೈದ್ಯರು ಮುಷ್ಕರ ನಡೆಸುತ್ತಿರುವ ಪರಿಣಾಮ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಅನೇಕ ಜೀವಗಳು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಗಳು ಕೂಡ ನಡೆದಿದೆ.
ಇವೆಲ್ಲವುದರ ನಡುವೆ ಮಂಡ್ಯದಲ್ಲೊಬ್ಬ ವೈದ್ಯರು ರೋಗಿಗಳ ಪಾಲಿಗೆ ದೇವರಾಗಿದ್ದಾರೆ. ಐದು ರೂಪಾಯಿಯ ವೈದ್ಯ ಎಂದೇ ಖ್ಯಾತಿ ಪಡೆದಿರುವ ಡಾ.ಶಂಕರೇಗೌಡ ಯಾವ ಮುಷ್ಕರವನ್ನು ಲೆಕ್ಕಿಸದೇ, ಮುಷ್ಕರಕ್ಕೆ ಬೆಂಬಲವನ್ನು ನೀಡದೆ ನಾಲ್ಕು ದಿನಗಳಿಂದಲೂ ತನ್ನ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ಮುಷ್ಕರಕ್ಕೆ ಕರೆ ಬಂದಿದ್ದರೂ, ಮುಷ್ಕರಕ್ಕೆ ಯಾವುದೇ ಬೆಂಬಲ ನೀಡದೆ ಕರ್ತವ್ಯ ನಿರ್ವಹಿಸಿ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಮಂಡ್ಯ ನಗರದ ಆರ್.ಪಿ ರಸ್ತೆಯಲ್ಲಿನ ಕ್ಲಿನಿಕ್ನಲ್ಲಿ ಕೆಲಸ ನಿರ್ವಹಿಸುವ ಇವರು ಚರ್ಮ, ಕುಷ್ಠ, ಲೈಂಗಿಕ ರೋಗ ತಜ್ಞರಾಗಿದ್ದಾರೆ.