ಬೆಳಗಾವಿ ನ : ಕಂಬಳ ಸಹಿತ ಹೋರಿ ಓಟಕ್ಕಿದ್ದ ಕಾನೂನು ತೊಡಕನ್ನು ನಿವಾರಿಸುವ ಉದ್ದೇಶದಿಂದ ಪ್ರಾಣಿಗಳಿಗೆ ಹಿಂಸಾಚಾರ ಮಾಡುವ ಎರಡನೇ ತಿದ್ದುಪಡಿ ವಿಧೇಯಕ- 2017 ನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಗಿದೆ. ಆ ಮೂಲಕ ಕಂಬಳ ಕ್ರೀಡೆ ಸಹಿತ ಮೂರು ಜಾನಪದ ಕ್ರೀಡೆಗಳ ಆಯೋಜನೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ.
ಈ ಹಿಂದೆ ಪ್ರಾಣಿ ಹಿಂಸಾಚಾರ ತಡೆಯಲು ಕೆಲವು ಮಾರ್ಪಾಡು ಮಾಡುವಂತೆ ಭಾರತ ಸರ್ಕಾರ ಸಲಹೆ ನೀಡಿತ್ತು. ಅದರ ಅನುಸಾರ ಕೆಲವೊಂದು ಮಾರ್ಪಾಡು ಅಳವಡಿಸಿ ರಾಜ್ಯ ಸರ್ಕಾರ ಆದ್ಯಾದೇಶ ಜುಲೈನಲ್ಲಿ ಹೊರಡಿಸಿ ಈ ಜಾನಪದ ಕ್ರೀಡೆಗಿದ್ದ ತಾತ್ಕಲಿಕ ಪರಿಹಾರ ಕಂಡುಕೊಂಡಿತ್ತು. ಇದೀಗ ಈ ಅಧ್ಯಾದೇಶಕ್ಕೆ ಬದಲಾಗಿ ಈ ವಿಧೇಯಕವನ್ನು ಮಂಡಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಒಂದು ವೇಳೆ ಮಸೂದೆ ಜಾರಿಯಾದರೆ ಕಂಬಳ ನಿಷೇಧ ಭೀತಿ ದೂರಗೊಳ್ಳಲಿದೆ.
ಈ ನಡುವೆ ಕಂಬಳ ಹಾಗೂ ಎತ್ತಿನಗಾಡಿ ಓಟಕ್ಕೆ ರಾಷ್ಟ್ರಪತಿ ಸುಗ್ರೀವಾಜ್ಞೆ ಮೂಲಕ ಅನುಮತಿ ನೀಡಿರುವ ಕ್ರಮವನ್ನು ವಿರೋಧಿಸಿ ಪ್ರಾಣಿ ದಯಾ ಸಂಘ ಪೆಟಾ ಮತ್ತೆ ಸುಪ್ರಿಂಕೋರ್ಟ್ ಗೆ ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ನ 17 ರ ಶುಕ್ರವಾರ ವಿಚಾರಣೆ ನಡೆಯಲಿದೆ.