ಮಂಗಳೂರು, ನ 17: ರಾಜ್ಯ ಸರಕಾರದ ವೈಫಲ್ಯದಿಂದ ಗೊಂದಲ ಉಂಟಾಗಿದ್ದು, ಜನ ಸಾಮನ್ಯರು ತೊಂದರೆ ಅನುಭವಿಸುವಂತಾಗಿದೆ. ಕೆಪಿಎನ್ ಇ ಕಾಯ್ದೆ ತರುವ ಮೂಲಕ ಸರಕಾರ ಬಡ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಜೆ ಕೃಷ್ಣ ಪಾಲೇಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ವೈದ್ಯರ ಮುಷ್ಕರ ಮುಂದುವರೆದ ಪರಿಣಾಮ ಗೊಂದಲ ಉಂಟಾಗಿದೆ. ಬೇರೆ ಬೇರೆ ಚಿಕಿತ್ಸೆಗಳಿಗೆ ಸರಕಾರ ದರ ನಿದಿಪಡಿಸಿ, ಖಾಸಗಿ ಆಸ್ಪತ್ರೆಗಳ ದರ ನಿಯಂತ್ರಣಕ್ಕೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸರಕಾರ ವೈದ್ಯರ ಬೇಡಿಕೆಯನ್ನು ಈಡೇರಿಸಿ, ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದರು.
ಕೆ.ಪಿ.ಎಂ.ಇ ಕಾಯ್ದೆ ತಿದ್ದುಪಡಿ ವಿರೋಧಿಸಿ ವೈದ್ಯರು ನಾಲ್ಕು ದಿನದಿಂದ ನಡೆಸುತ್ತಿರುವ ಮುಷ್ಕರದಿಂದ ಈಗಾಗಲೇ 40 ಕ್ಕೂ ಮಿಕ್ಕಿ ಜನ ಮೃತಪಟ್ಟಿದ್ದಾರೆ. ಸರಕಾರ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಯಂತೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ವೈದ್ಯರು ಮುಷ್ಕರವನ್ನು ಕೈ ಬಿಟ್ಟು ಮಾನವೀಯತೆಯಿಂದ ಕೆಲಸ ಮಾಡಬೇಕು. ಬಡವರ ಜೀವದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.