ಮಂಗಳೂರು, ನ 18: ದೇವರನಾಡು ಎಂದೇ ಕರೆಯುವ ಕೇರಳದ ಮಲಯಾಳಂ ಚಿತ್ರತಂಡ ಇದೀಗ ಮಂಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದ್ದು, ಕರಾವಳಿಯ ಬೇರೆ ಬೇರೆ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸಿ ಚಿತ್ರರಸಿಕರಲ್ಲಿ ಕುತೂಹಲ ಕೆರಳಿಸಿದೆ.
ಕೇರಳದಲ್ಲಿಯೇ ಸುಂದರ ತಾಣಗಳಿದ್ದು, ಅನೇಕ ಮಲಯಾಳಂ ಸಿನಿಮಾಗಳು ಅಲ್ಲೇ ಚಿತ್ರೀಕರಣಗೊಂಡಿದ್ದವು. ಆದರೆ ಇದೀಗ ಮಲಯಾಳಂ ಚಿತ್ರತಂಡವು ಶೂಟಿಂಗ್ ಮಾಡಲು ಮಂಗಳೂರನ್ನು ಅರಸಿ ಬಂದಿರುವುದು ಗಮನಾರ್ಹವಾಗಿದೆ. ಈ ಹಿಂದೆಯೂ ಅನೇಕ ಮಲಯಾಳಂ ಚಿತ್ರಗಳು ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿದ್ದವು.
ಮಲಯಾಳಂನಲ್ಲಿ ಪ್ರೇಕ್ಷರಿಗೆ ಭರಪೂರ ಮನೋರಂಜನೆ ಉಣಿಸಲಿರುವ ಬಹುನಿರೀಕ್ಷಿತ ಸಿನೆಮಾ ಕಾಯಂಕುಲಂ ಕೊಚ್ಚುನ್ನಿಯ ಬಹುತೇಕ ಚಿತ್ರೀಕರಣ ಕಡಲನಗರಿಯ ಮಂಗಳೂರಿನಲ್ಲಿ ನಡೆಯುತ್ತಿದೆ. ಮಲಯಾಲಂನ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿರುವ ನಿವಿನ್ ಪೌಳಿ ಅವರು ಕರಾವಳಿಯಲ್ಲಿಯೇ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದು, ಮಂಗಳೂರು ಹೊರವಲಯದ ಮುಡಿಪುವಿನಿಂದ ತುಸು ದೂರದಲ್ಲಿರುವ ಬಂಟ ಕುಟುಂಬದ ಪ್ರತಿಷ್ಠಿತ ಮನೆತನವಾದ ನಾರ್ಯಗುತ್ತುವಿನ ಹಳೆಯ ಮನೆಯೊಂದರಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಯಂಕುಲಂ ಕೊಚ್ಚುನ್ನಿ ಮಲಯಾಳಂ ಸಿನಿಮಾ ಫರಂಗಿಪೇಟೆ ಸೇರಿದಂತೆ ಅನೇಕ ನದಿ ತಿರ ಮತ್ತು ದ್ವೀಪಗಳಲ್ಲಿ ದೊಡ್ಡ ಮಟ್ಟಿನ ಸೆಟ್ ಹಾಕಿ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದೆ.
ನಿರ್ದೇಶಕ ರೋಶನ್ ಆ್ಯಂಡ್ರೋಸ್ ಇವರ ನಿರ್ದೇಶನ ಚಿತ್ರಕ್ಕಿದೆ. ಬಾಬ್ಬಿ ಹಾಗೂ ಸಂಜಯ್ ಅವರ ನೇತೃತ್ವದಲ್ಲಿ ನಿಜ ಜೀವನದ ಘಟನೆಯನ್ನು ಆಧರಿಸಿ ಕಾಯಂಕುಲಂ ಕೊಚ್ಚುನ್ನಿ ಚಿತ್ರ ನಿರ್ಮಾಣವಾಗಿದ್ದು, ಪ್ರೇಕ್ಷಕರಿಗೆ ಉತ್ತಮ ಸಂದೇಶವನ್ನು ನೀಡುವುದರಲ್ಲಿ ಸಂದೇಹವಿಲ್ಲ. ಶ್ರೀಮಂತ ವ್ಯಕ್ತಿಗಳಿಂದ ಹಣ ದರೋಡೆ ಮಾಡಿ ಅದನ್ನು ಬಡ ಜನರಿಗೆ ಹಂಚುವ ಕೆಲಸ ಕೊಚ್ಚುನ್ನಿಯದು. ಹೀಗೆ ನೈಜ ಕಥೆಯನ್ನು ಸುಂದರವಾಗಿ ಎಣೆದು ತೋರಿಸಲಿರುವ ಮಾಲಯಾಳಂ ಚಿತ್ರವೊಂದು ಮಂಗಳೂರು ವ್ಯಾಪ್ತಿಯಲ್ಲಿ ಶೂಟಿಂಗ್ ಆಗುತ್ತಿರುವುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.