ಕುಂದಾಪುರ ನ 18 : ರಾಜಕೀಯ ಒಳಜಗಳದ ಹಿನ್ನಲೆಯಲ್ಲಿ ಬೇಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ೧ನೇ ವಾರ್ಡ್ನ ಜನರಿಗೆ ಕುಡಿಯುವ ನೀರು ನೀಡದೇ ಸತಾಯಿಸುತ್ತಿದ್ದು, ಈ ಹಿನ್ನೆಲೆ ಬೇಳೂರು ಗ್ರಾಮಪಂಚಾಯತ್ನ ಮುಂಭಾಗದಲ್ಲಿ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿ ಪಂಚಾಯತ್ ಅಧ್ಯಕ್ಷ ಮತ್ತು ಅಧಿಕಾರಿಗಳ ವಿರುದ್ಧ ಖಾಲಿ ಕೊಡಪಾನ ತೋರಿಸಿ ಪ್ರತಿಭಟನೆ ನಡೆಸಿದರು.
ಬೇಳೂರು ಗ್ರಾಮಪಂಚಾಯತ್ ಅಧ್ಯಕ್ಷ ಕರುಣಾಕರ್ ಶೆಟ್ಟಿ ಸರ್ವಾಧಿಕಾರಿ ಧೋರಣೆ ತಳೆದು, ಈ ಹಿಂದೆ ನೀವು ಬಿಜೆಪಿಗೆ ಮತ ಹಾಕಿದ್ದಿರಿ ನೀರನ್ನು ಅವರಲ್ಲಿ ಕೇಳಿ ಅನ್ನುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು, ಇದಕ್ಕೆ ಪಿಡಿಓ ಸೇರಿದಂತೆ ಎಲ್ಲಾ ಗ್ರಾಮಪಂಚಾಯತ್ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಈ ಅಸಮರ್ಪಕ ನೀರಿನ ಸರಭರಾಜಿನ ಸಮಸ್ಯೆಯನ್ನ ಅನುಭವಿಸುತ್ತಿದ್ದು, ಬೇಕೆಂದಲೇ ನಮ್ಮ ವಾರ್ಡ್ಗೆ ನೀರು ಬಿಡುವಲ್ಲಿ ತೊಂದರೆ ನೀಡುತ್ತಿದ್ದು, ನಾವು ನೀರನ್ನು ಬಿಡಲಾರಂಭಿಸಿದ ಬಳಿಕ ಅನವಶ್ಯಕವಾಗಿ ಪಂಪ್ಸೆಟ್ಗೆ ಬೀಗ ಜಡಿದು ತೊಂದರೆ ನೀಡುತ್ತಿದ್ದಾರೆ ಎನ್ನುವುದು ಪ್ರತಿಭಟನಾಕಾರರ ಆರೋಪ.ತನ್ನ ವಾರ್ಡ್ನ ಜನರ ಅನುಕೂಲಕ್ಕೆಂದು ತಮ್ಮದೇ ಖರ್ಚಿನಲ್ಲಿ ಪೈಪ್ ಲೈನ್ ಮೊದಲಾದ ವ್ಯವಸ್ಥೆಗಳನ್ನ ಮಾಡಿದ್ದು, ಆದರೆ ಬೇಕೆಂದೆ ಕೆಲವೊಂದು ಕಡೆ ಪೈಪ್ಲೈನ್ ಒಡೆದು ಸಾರ್ವಜನಿಕ ಸಂಪನ್ಮೂಲ ರಕ್ಷಿಸಬೇಕಾದವರು ಭಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ವಾರ್ಡ್ ಸದಸ್ಯ ಸೀತಾನದಿ ಕರುಣಾಕರ್ ಎಂ ಶೆಟ್ಟಿ ಆರೋಪಿಸಿದರು.
ಈ ಆರೋಪಗಳ ಕುರಿತು ಮಾಧ್ಯಮದವರು ಅಧ್ಯಕ್ಷ ಕರುಣಾಕರ್ ಶೆಟ್ಟಿ ಅಭಿಪ್ರಾಯ ಕೇಳಲು ಮುಂದಾದಾಗ, ಅವರು ತಮ್ಮ ಅಭಿಪ್ರಾಯ ಹೇಳಲು ನಿರಾಕರಿಸಿದರು. ನಂತರ ಈ ಬಗ್ಗೆ ಪಂಚಾಯತ್ ಕಾರ್ಯದರ್ಶಿಗಳಲ್ಲಿ ವಿಚಾರಿಸಿದಾಗ, ಇಲ್ಲಿನ ಜನರು ನೀರನ್ನ ತಮಗೆ ಬೇಕಾದಂತೆ ಬಳಸಿಕೊಂಡು ಪೋಲು ಮಾಡುತ್ತಿದ್ದಾರೆ ಎಂಬ ಆರೋಪವನ್ನ ಸಾರ್ವಜನಿಕರ ಮೇಲೆ ಹಾಕಿದರು. ಇದಕ್ಕೆ ಆಕ್ರೋಶಿತರಾದ ಸಾರ್ವಜನಿಕರು ಕಾರ್ಯದರ್ಶಿಯನ್ನ ತರಾಟೆಗೆ ತೆಗೆದುಕೊಂಡರು. ಬಳಿಕ ಕೋಟ ಠಾಣೆ ಎಎಸ್ಐ ಸುಧಾಪ್ರಭು ಮತ್ತು ಹೆಡ್ಕಾನ್ಸ್ಟೆಬಲ್ ಪ್ರದೀಪ್ ನಾಯಕ್ ಬೇಳೂರು ಪಂಚಾಯತ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ನೀರು ಬಿಡುವಂತೆ ಸೂಚಿಸಿದರು. ನಂತರ ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಪಂಚಾಯತ್ ಅಧ್ಯಕ್ಷ ಕುಡಿಯುವ ನೀರು ಬಿಟ್ಟ ಬಳಿಕ ಪ್ರತಿಭಟನೆಯನ್ನ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.