ಕಾಸರಗೋಡು ನ 19 : ಪಡಿತರ ಅಕ್ಕಿಯನ್ನು ಗೋದಾಮುಗಳಿಂದ ಕಾಳಸಂತೆಯಿಂದ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕಾಸರಗೋಡಿನ ಸಿವಿಲ್ ಸಪ್ಲೈಸ್ ಗೋದಾಮಿಗೆ ಕೊಚ್ಚಿಯಿಂದ ಆಗಮಿಸಿದ ಸಿ ಬಿ ಐ ಅಧಿಕಾರಿಗಳು ಶನಿವಾರ ಧಿಡೀರ್ ದಾಳಿ ನಡೆಸಿದರು.ಆಹಾರ ಸುರಕ್ಷಾ ವಿಭಾಗದ ವಿದ್ಯಾನಗರದಲ್ಲಿರುವ ಸಿವಿಲ್ ಸಪ್ಲೈಸ್ ಗೋದಾಮುಗಳಿಗೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ಪ್ಯಾಕ್ ಮಾಡಿದ 50 ಕಿಲೋದ 70 ಗೋಣಿ ಚೀಲ ಅಕ್ಕಿ , ಪ್ಯಾಕಿಂಗ್ ಗೆ ಬಳಸಲಾಗುತ್ತಿದ್ದ ಭಾರೀ ಪ್ರಮಾಣದ ಗೋಣಿಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಗೋದಾಮು ಸಮೀಪದ ಇನ್ನೊಂದು ಖಾಸಗಿ ಕಂಪೆನಿ ಮೂಲಕ ಕಾಳಸಂತೆಯಲ್ಲಿ ವಿವಿಧ ಕಂಪೆನಿ ಬ್ರಾಂಡ್ ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇವು ಸಿವಿಲ್ ಸಪ್ಲೈಸ್ ಅಂಗಡಿ ಗೆ ಸರಬರಾಜಾಗದೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಸಿಬಿಐ ಅಧಿಕಾರಿಗಳಿಗೆ ಲಭಿಸಿತ್ತು.
ದಾಳಿ ಕುರಿತು ಹೆಚ್ಚಿನ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಗೋದಾಮಿನ ಇಬ್ಬರು ಸಿಬಂದಿಗಳನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಲಾಗುತ್ತಿದೆ.