ಬಂಟ್ವಾಳ ನ 19: ಸೇರಿದ್ದ ಸಹಸ್ರಾರು ಭಕ್ತರ ಸಮ್ಮುಖ ಭಾನುವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕದ ದೇವಸ್ಥಾನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣಕ್ಕೆ ಧ್ವಜಸ್ತಂಭ ನವೀಕರಣಕ್ಕಾಗಿ ಬಿಲ್ಲವ ಸಮಾಜದ ಸೇವಾ ರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸುವ ನೂತನ ಧ್ವಜಸ್ತಂಭದ ಮೆರವಣಿಗೆ ವೈಭವದೊಂದಿಗೆ ಶ್ರದ್ಧಾಭಕ್ತಿಪೂರ್ವಕವಾಗಿ ನಡೆಯಿತು.ವಿವಿದ ವಾದ್ಯಘೋಷಗಳೊಂದಿಗೆ ಸೇರಿದ ಸಹಸ್ರ ಸಂಖ್ಯೆಯ ಭಕ್ತರನ್ನೊಡಗೂಡಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಸಮ್ಮುಖದಿಂದ ಆರಂಭಗೊಂಡ ಮೆರವಣಿಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಸಾನ್ನಿಧ್ಯ ನೀಡಿದರು.
ಈ ಸಂದರ್ಭ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಯನ್ನು ಬಿ.ಸಿ.ರೋಡಿನಲ್ಲಿ ಗಣ್ಯರಾದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಸಹಿತ ಗಣ್ಯರು ಸ್ವಾಗತಿಸಿದರು. ಈ ಸಂದರ್ಭ ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ರಾಮದಾಸ್ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಪುರುಷ ಎನ್.ಸಾಲಿಯಾನ್ ನೆತ್ರಕೆರೆ, ಕೋಶಾಧಿಕಾರಿ ಬಳ್ಳಿ ಚಂದ್ರಶೇಖರ ಕೈಕಂಬ, ಉಪಾಧ್ಯಕ್ಷರಾದ ಗೋಪಾಲಕೃಷ್ಣ ಕೈಕಂಬ, ಪ್ರಮುಖರಾದ ಮೋಹನ್ ಸಾಲಿಯಾನ್ ಬೆಂಜನಪದವು, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಮಾಜಿ ಸಚಿವ ನಾಗರಾಜ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಉಮಾನಾಥ ಕೋಟ್ಯಾನ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ರವೀಂದ್ರ ಕಂಬಳಿ ಸಹಿತ ತಾಲೂಕಿನ ಜನಪ್ರತಿನಿಧಿಗಳು, ರಾಜಕಾರಣಿಗಳು ಉಪಸ್ಥಿತರಿದ್ದರು.ಮೆರವಣಿಗೆಯಲ್ಲಿ ಚೆಂಡೆ, ಬ್ಯಾಂಡ್, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್, ಚಿಲಿಪಿಲಿಗೊಂಬೆ, ಭಜನೆ ಸುಡುಮದ್ದು, ಹುಲಿವೇಷ ಇನ್ನಿತರ ವಾದ್ಯ ಘೋಷಗಗಳು ಇದ್ದವು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಬಹಳ ಪುರಾತನ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಧ್ವಜಸ್ತಂಭವು ಶಿಥಿಲಗೊಂಡಿರುವುದನ್ನು ಮನಗಂಡ ಅಂದಿನ ಸಾವಿರ ಸೀಮೆಯ ಬಿಲ್ಲವ ಸಮಾಜದ ಭಾಂದವರು ಒಟ್ಟು ಸೇರಿ ತಮ್ಮ ಶಕ್ತ್ಯಾನುಸಾರ ಧನ ಸಂಗ್ರಹ ಮಾಡಿ ಧ್ವಜಸ್ತಂಭವನ್ನು ಸಂಪೂರ್ಣವಾಗಿ ನವೀಕರಿಸಿ ದೇವಿಯ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸುವ ದೃಢ ಸಂಕಲ್ಪಕ್ಕೆ ಬದ್ಧರಾಗಿ 1958 ಮಾರ್ಚ್ 26 ರಂದು ಸಕಲ ವಿಧಿ ವಿಧಾನಗಳೊಂದಿಗೆ ಧ್ವಜಸ್ತಂಭವನ್ನು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದ್ದರು. 2000 ವರ್ಷಗಳ ಇತಿಹಾಸವಿರುವ ಶ್ರೀ ಮಾತೆಯ ದೇಗುಲ ಶಿಥಿಲಗೊಂಡಿದ್ದು, ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಮಾತೆಯ ಪ್ರೇರಣೆಯಂತೆ ನವನಿರ್ಮಾಣದ ಮಹಾ ಕಾರ್ಯಕ್ಕೆ ಸಜ್ಜಾಗಿದೆ. ಕ್ಷೇತ್ರದಲ್ಲಿ ಇರಿಸಿದ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಅತ್ಯುನ್ನತವಾಗಿರುವ ಈಗಿನ ಧ್ವಜಸ್ತಂಭವನ್ನು ತೆಗೆದು ಅದರಂತೆಯೇ ನೂತನ ಧ್ವಜಸ್ತಂಭವನ್ನು ಪ್ರತಿಷ್ಠಾಪಿಸುವ ಕಾರ್ಯದ ಜವಾಬ್ದಾರಿಯನ್ನು ಸಮಾಜಕ್ಕೆ ನೀಡಲಾಗಿತ್ತು. ಇದಕ್ಕೆ ಸೂಕ್ತವಾದ ಮರವನ್ನು ಆಯ್ಕೆ ಮಾಡಿ, ಸುಳ್ಯ ತಾಲೂಕಿನ ಸಂಪಾಜೆ ರಕ್ಷಿತಾರಣ್ಯದಲ್ಲಿ ನ.೧೫ರಂದು ಮರ ಮೂಹೂರ್ತ ನಡೆದಿತ್ತು.