ಉಡುಪಿ ನ 19 : ಮಧ್ವರಾಜ್ ನಿಮಗೇನಾದ್ರೂ ಬಿಜೆಪಿ ಸೇರುವ ಅಲೋಚನೆ ಇದೆನಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮದವರ ಮುಂದೆ ನೇರವಾಗಿ ಸಚಿವ ಪ್ರಮೋದ್ ಮಧ್ವರಾಜ್ ರನ್ನು ಕೇಳಿದ ಪ್ರಶ್ನೆ ಇದು. ಇದಕ್ಕೆ ಉತ್ತರಿಸಿದ ಸಚಿವ ಪ್ರಮೋದ್ 'ನಾನು ಬಿಜೆಪಿ ಸೇರುತ್ತಿಲ್ಲ, ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಇದೆಲ್ಲಾ ಸುಳ್ಳು ಸುದ್ದಿ' ಎಂದು ಉತ್ತರಿಸಿದರು. ಈ ಸ್ಪಷ್ಟೀಕರಣ ಕಂಡು ಬಂದಿದ್ದು ರವಿವಾರ ಉಡುಪಿಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಬಿಆರ್ಎಸ್ ಸ್ವಾಸ್ಥ್ಯ ಮತ್ತು ಸಂಶೋಧನ ಸಂಸ್ಥೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕರ್ನಾಟಕ ಸರಕಾರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆಗೆಂದು ಸಿಎಂ ಸಿದ್ದರಾಮಯ್ಯ ಬಂದಾಗ. ಕಳೆದ ಕೆಲವು ದಿನಗಳಿಂದ ಕರಾವಳಿ ರಾಜಕೀಯ ವಲಯದಲ್ಲಿ ಸಚಿವ ಮದ್ವರಾಜ್ ಬಿಜೆಪಿ ಸೇರಲಿದ್ದಾರೆ ಎನ್ನುವ ಗುಸುಪಿಸು ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ಪೂರಕವೆಂಬಂತೆ ಕಳೆದ ಬುಧವಾರ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಸಹಕಾರ ಸಪ್ತಾಹದ ಬಹಿರಂಗ ಸಭೆಯಲ್ಲಿ ಸಂಸದ ನಳೀನ್ ಕುಮಾರ್ ತಮ್ಮ ಭಾಷಣದಲ್ಲಿ 'ಇನ್ನು ಕೆಲವೇ ದಿನಗಳಲ್ಲಿ ನೀವು (ಪ್ರಮೋದ್ ಮಧ್ವರಾಜ್) ನಮ್ಮೊಟ್ಟಿಗೆ ಬರಲಿದ್ದೀರಿ' ಎಂಬ ಹೇಳಿಕೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು.