ಮಂಗಳೂರು,ಮೇ05(DaijiworldNews/AZM):ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ಖಂಡಿಸಿ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಮುಂಭಾಗ ಮುಸ್ಲಿಂ-ಕ್ರೈಸ್ತ ಬಾಂಧವರು ಸೇರಿ "ಮುಸ್ಲೀಮರು ನಿಮ್ಮೊಂದಿಗೆ" ಎಂಬ ಘೋಷಣೆಯೊಂದಿಗೆ ಮೌನ ಸರಪಳಿ ನಡೆಸಿದ್ದಾರೆ.












ಕರಾವಳಿಯಲ್ಲಿ ಮುಸ್ಲಿಂ ಕ್ರೈಸ್ತ ಬಾಂಧವರು ಸಹೋದರರಂತೆ ಬಾಳುತ್ತಿದ್ದು, ಯಾವ ಶಕ್ತಿಗೂ ತಮ್ಮ ಸಂಬಂಧವನ್ನು ಹೊಡೆದು ಹಾಕಲು ಸಾಧ್ಯವಿಲ್ಲ ಎನ್ನುವುದರ ಮೂಲಕ ಈಸ್ಟರ್ ದಿನ ಏ.21 ಭಾನುವಾರದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಮೂಲಕ ಕ್ರೈಸ್ತ ಬಾಂಧವರ ಜೊತೆ ಭಯೋತ್ಪಾದಕರು ನಡೆಸಿದ ನೀಚ ಕೃತ್ಯವನ್ನು ಖಂಡಿಸಲಾಯಿತು.
ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಮುಂಭಾಗ ಮುಸ್ಲಿಂ- ಕ್ರೈಸ್ತ ಬಾಂಧವರು ಸೇರಿ "ಮುಸ್ಲೀಮರು ನಿಮ್ಮೊಂದಿಗೆ" ಎಂಬ ಘೋಷಣೆ ಹಾಗೂ ಭಯೋತ್ಮಾದಕರೊಂದಿಗೆ ನಾವಿಲ್ಲ ಕ್ರೈಸ್ತ ಬಾಂಧವರೊಂದಿಗೆ ನಾವೆಲ್ಲಾ ಎನ್ನುವ ಧ್ಯೇಯದೊಂದಿಗೆ ಮೌನ ಸರಪಳಿಯನ್ನು ನಡೆಸಲಾಗಿದ್ದು, ಹಲವಾರು ಮುಸ್ಲಿಂ-ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಚರ್ಚ್ ನ ಧರ್ಮ ಗುರು ಫಾ.ವಲೆರಿಯನ್ ಡಿಸೋಜ, ಏಕತೆಯ ಸಂದೇಶ ಸಾರಿದ ಮುಸ್ಲಿಮರ ಕ್ರಮವನ್ನು ಶ್ಲಾಘಿಸಿದರು. ಇದೊಂದು ಐತಿಹಾಸಿಕ ಕ್ಷಣ. ಇದರಲ್ಲಿ ಭಾಗಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಶಾಂತಿಯೇ ತನ್ನ ಮಂತ್ರವೆನ್ನುವ ಮುಸ್ಲಿಮರು ಭಯೋತ್ಪಾದನಾ ಚಟುವಟಿಕೆಯನ್ನು ತೀವ್ರವಾಗಿ ಖಂಡಿಸುತ್ತಿರುವುದು ಕ್ರೈಸ್ತರ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಕ್ರೈಸ್ತರೆಲ್ಲ ಶಾಂತಿಗಾಗಿ, ಪ್ರೀತಿಗಾಗಿ, ಸಂಘಟನೆಗಾಗಿ ಹೋರಾಡಲಿದ್ದಾರೆ. ಈ ಹೋರಾಟಕ್ಕೆ ಮುಸ್ಲಿಮರ ಬೆಂಬಲ ಸೂಚಿಸಿರುವುದು ನಮಗೆ ಸಹಸ್ರ ಆನೆಬಲ ನೀಡಿದೆ. ಎಲ್ಲ ಸಮುದಾಯಗಳು ಪರಸ್ಪರ ಪ್ರೀತಿಯಿಂದ ಬದುಕು ಬಾಳಬೇಕು ಎಂದು ಕರೆ ನೀಡಿದರು.
ಮುಸ್ಲಿಮರ ಪರ ಮಾತನಾಡಿದ ಸೈಫ್ ಸುಲ್ತಾನ್, ಮುಸ್ಲಿಮ್ ಧರ್ಮವು ಶಾಂತಿ-ಐಕ್ಯವನ್ನು ಸದಾ ಬೆಂಬಲಿಸುತ್ತದೆ. ಸಮುದಾಯಗಳು ಎಲ್ಲ ಸಂದರ್ಭಗಳಲ್ಲೂ ಏಕತೆಯಿಂದ ಕೂಡಿದ್ದರೆ ಸಂತಸದ ಜೀವನ ನಡೆಸಬಹುದು. ನೆರೆಹೊರೆಯರು, ಸಮುದಾಯಗಳನ್ನು ಪ್ರೀತಿಸಬೇಕು ಎಂದರು ಹೇಳಿದರು.
ಫ್ಲೋರಿನ್ ಹಿಸ್ಲೊ ಎಂಬವರು ಮಾತನಾಡಿ, ಧರ್ಮಗಳಿಗಿಂತ ಮಾನವೀಯತೆ ಮಿಗಿಲಾದದ್ದು. ಉದ್ವಿಗ್ನ ಪರಿಸ್ಥಿತಿಯಲ್ಲೂ ಮುಸ್ಲಿಮರು ಕ್ರೈಸ್ತರಿಗೆ ಬೆಂಬಲ ಕೋರುತ್ತಿರುವುದು ಆಶಾದಾಯಕ ಬೆಳವಣಿಗೆ. ನಾವೆಲ್ಲರೂ ಮಾನವರು ಇರುವಷ್ಟು ದಿನಗಳಲ್ಲಿ ಪರಸ್ಪರ ಪ್ರೀತಿ, ಸ್ನೇಹದಿಂದ ಕೂಡಿರಬೇಕು ಎಂದರು.
. ಶಾಂತಿ-ಐಕ್ಯತೆಗೆ ಬೆಂಬಲ ಕೋರುವ ಸಭೆಯ ನೇತೃತ್ವವನ್ನು ಸೈಫ್ ಸುಲ್ತಾನ್ ಹಾಗೂ ಆಸಿಫ್ ಡೀಲ್ ವಹಿಸಿದ್ದರು.
‘ಭಯೋತ್ಪಾದನೆಗೆ ಧರ್ಮವಿಲ್ಲ’, ‘ಅನೇಕತೆಯಲ್ಲಿ ಏಕತೆ’, ‘ಕ್ರೈಸ್ತರ ಜತೆ ಮುಸ್ಲಿಮರು’, ‘ಭಯ ಉತ್ಪಾದಕರೊಂದಿಗೆ ನಾವಿಲ್ಲ, ಶ್ರೀಲಂಕಾದವರೊಂದಿಗೆ ನಾವೆಲ್ಲ’, ‘ನ್ಯೂಝಿಲ್ಯಾಂಡ್ನಿಂದ ಶ್ರೀಲಂಕಾದವರೆಗೂ ಶಾಂತಿಮಂತ್ರದಲ್ಲಿ ನಾವೆಲ್ಲಾ ಸಂಘಟಿತರು’, ‘ಮುಸ್ಲಿಮರು ನಿಮ್ಮೊಂದಿಗೆ’ ಹೆಸರಿನ ಬಿತ್ತಿ ಫತ್ರದ ಫಲಕಗಳನ್ನು ಪ್ರದರ್ಶಿಸಿ, ಶಾಂತಿ-ಏಕತೆಗೆ ಬೆಂಬಲ ಕೋರಲಾಯಿತು.
ಈ ಸಂದರ್ಭದಲ್ಲಿ ಕೆಸಿಸಿಐ ಅಧ್ಯಕ್ಷ ಪಿ.ಅಬ್ದುಲ್ ಹಮೀದ್, ಆಝಾದ್ ಗ್ರೂಪ್ನ ಮನ್ಸೂರ್ ಅಹ್ಮದ್, ಖಾಸಿಮ್ ಅಹ್ಮದ್, ಆಬಿದ್ ಮತ್ತಿತರರು ಉಪಸ್ಥಿತರಿದ್ದರು