ಗಂಗೊಳ್ಳಿ, ಜು 04 (DaijiworldNews/MS): ಚುನಾವಣೆ ಪೂರ್ವದಿಂದಲೂ ಹಿಂದು ವಿರೋಧಿ ಧೋರಣೆಯನ್ನು ತೆಳೆಯುತ್ತಿದ್ದ ಕಾಂಗ್ರೆಸ್ ಪಕ್ಷ, ಇಂದು ಹಿಂದು ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಬಹಿರಂಗವಾಗಿ ಹಿಂದು ವಿರೋಧಿ ಹೇಳಿಕೆಗಳನ್ನು ನೀಡಿ ಹಿಂದುಗಳನ್ನು ಅವಮಾನಿಸಿ ಹಿಂದುಗಳ ಭಾವನೆಗಳಿಗೆ ಧಕ್ಕೆ ಬರುವಂತೆ ಮಾಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಹಿಂದುಗಳ ಕ್ಷಮೆ ಕೇಳಬೇಕು. ಇಂತಹ ಹೇಳಿಕೆಗಳನ್ನು ನೀಡಿದ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಹೇಳಿದರು.


ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಯುವಮೋರ್ಚಾ ವತಿಯಿಂದ ಹಿಂದು ವಿರೋಧಿ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ತ್ರಾಸಿ ಜಂಕ್ಷನ್ನಲ್ಲಿ ಬುಧವಾರ ಸಂಜೆ ಜರಗಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಸುಳ್ಳನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಾಂಗ್ರೆಸ್, ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಗೆದ್ದಿದೆ. ವಾಲ್ಮೀಕಿ ನಿಗಮದಲ್ಲಿ ಸುಮಾರು 187 ಕೋಟಿ ರೂ. ಹಗರಣ, ಮುಡಾ ಹಗರಣ ಸೇರಿದಂತೆ ಅನೇಕ ಹಗರಣಗಳನ್ನು ನಡೆಸಿ ಹಣವನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಇಡೀ ಜಗತ್ತು ಸನಾತನ ಹಿಂದು ಧರ್ಮದ ಮೇಲೆ ನಂಬಿಕೆ, ವಿಶ್ವಾಸವನ್ನಿಟ್ಟಿರುವಾಗ, ಡೋಂಗಿ ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಿಂದು ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಿಂದಿನಿಂದಲೂ ಹಿಂದುಗಳ ವಿರುದ್ಧ ದ್ವೇಷ ಕಾರುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ದೇಶದ ಹಿಂದುಗಳ ಕ್ಷಮೆಯಾಚಿಸಬೇಕು ಎಂದರು.
ಬೈಂದೂರು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಮತ್ತು ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುಧಾಕರ ಶೆಟ್ಟಿ ನೆಲ್ಯಾಡಿ ಮಾತನಾಡಿದರು. ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಬಿಜೂರು, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಕುಂದರ್, ಮುಖಂಡರಾದ ಉಮೇಶ ಮೇಸ್ತ, ಹರೀಶ ಮೇಸ್ತ, ಪ್ರೇಮಾ ಪೂಜಾರಿ, ಶಾಂತಿ ಖಾರ್ವಿ, ಶೋಭಾ ಜಿ.ಪುತ್ರನ್, ಅನಿತಾ ಆರ್.ಕೆ., ರಾಘವೇಂದ್ರ ನೆಂಪು, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ಖಾರ್ವಿ, ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ, ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.