ಮಂಗಳೂರು, ಜು.05(DaijiworldNews/AA): ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಎರಡು ಪಟ್ಟು ದ.ಕ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಮೀಸಲಿಡಲಾಗಿದೆ.

ದ.ಕ ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಈ ಮಳೆಯೇ ಮಳೆಯೇ ಡೆಂಗ್ಯೂ ಜ್ವರ ತರುವ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ಹೀಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ 15 ಹಾಸಿಗೆಯ ಸಾಮಾನ್ಯ ವಾರ್ಡ್ ಮತ್ತು 8 ಹಾಸಿಗೆಯ ವೆಂಟಿಲೇಟರ್ ವಾರ್ಡ್ ಅನ್ನು ಮೀಸಲಿಸಲಾಗಿದೆ. ತಾಲೂಕು ಮಟ್ಟದಲ್ಲೂ ಡಂಗ್ಯೂ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಸದ್ಯ ದ.ಕ ಜಿಲ್ಲೆಯಲ್ಲಿ 263 ಡೆಂಗ್ಯೂ ಪ್ರಕರಣಗಳಿವೆ. ಈ ಪೈಕಿ 113 ಪ್ರಕರಣ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದು, ಸದ್ಯ 30 ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ. ಹೆಚ್ಚಿನ ಸೋಂಕಿತರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ವರ್ಷ ಈ ಸಮಯಕ್ಕೆ 120 ಪ್ರಕರಣವಿತ್ತು. ಆದರೆ ಆಗಸ್ಟ್ ನಿಂದ 3 ತಿಂಗಳು ಏರಿಕೆಯಾಗಿತ್ತು. ಆದರೆ, ಈ ಬಾರಿ ಜೂನ್ ಆರಂಭದಲ್ಲೇ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದು ಡೆಂಗ್ಯೂ ಪ್ರಕರಣ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ನಗರಕ್ಕೆ ವಿವಿಧ ಜಿಲ್ಲೆ, ಹೊರ ರಾಜ್ಯದಿಂದ ಉದ್ಯೋಗ, ಶಿಕ್ಷಣ ಸಂಬಂಧ ಜನರು ಬರುತ್ತಿದ್ದು, ಅವರಲ್ಲೇ ಕೆಲವರಿಗೆ ರೋಗ ಲಕ್ಷಣ ಕಂಡು ಬರುತ್ತಿದೆ. ಕೇರಳ ಗಡಿ ಪ್ರದೇಶವೂ ಜಿಲ್ಲೆಗೆ ತಾಗಿಕೊಂಡಿದೆ. ಆದರೆ, ಸದ್ಯ ಒಂದೇ ಕಡೆ ಕ್ಲಸ್ಟರ್ ಮಟ್ಟದಲ್ಲಿ ಡೆಂಗ್ಯೂ ಪ್ರಕರಣ ದಾಖಲಾಗುತ್ತಿಲ್ಲ, ಬದಲಾಗಿ ಅಲ್ಲಲ್ಲಿ ಡೆಂಗ್ಯೂ ಪ್ರಕರಣ ದಾಖಲಾಗುತ್ತಿದೆ.
ದ.ಕ ಜಿಲ್ಲಾದ್ಯಂತ ಲಾರ್ವಾ ಸರ್ವೇ ಕೈಗೊಳ್ಳಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದ್ದು, ಗ್ರಾಮೀಣ ಭಾಗದ ಆರೋಗ್ಯ ಸುರಕ್ಷತಾ ಅಧಿಕಾರಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಎಂಪಿಡಬ್ಲೂ ಅಧಿಕಾರಿಗಳು, ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಮನೆಗಳಲ್ಲಿ, ಅಂಗಡಿ- ಮುಂಗಟ್ಟುಗಳಲ್ಲಿ ಪ್ರತೀ ದಿನ ಲಾರ್ವಾ ಸರ್ವೇ ನಡೆಸುತ್ತಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮುನ್ನೆಚ್ಚರಿಕೆ ವಹಿಸುವಂತೆ ತೋಟಗಾರಿಕೆ, ಕೆಎಸ್ಆರ್ಟಿಸಿ, ಸ್ಥಳೀಯಾಡಳಿತ, ಮೀನುಗಾರಿಕೆ ಇಲಾಖೆ ಸಹಿತ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ. ರಬ್ಬರ್ ಪ್ಲಾಂಟ್, ಪೈನಪಲ್, ಅಡಿಕೆ ತೋಟಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕೆಎಸ್ಆರ್ಟಿಸಿಯ ಡಿಪೋಗಳಲ್ಲಿರುವ ಟೈರ್ಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಚರಂಡಿ ಸಹಿತ ಸಾರ್ವಜನಿಕ ಸ್ಥಳದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲು ಸ್ಥಳೀಯಾಡಳಿತಕ್ಕೆ ಸೂಚಿಸಲಾಗಿದೆ. ಮೀನುಗಾರರು ದೋಣಿಗಳ ಅಕ್ಕಪಕ್ಕ ಟೈರ್ಗಳನ್ನು ಇರಿಸಿದ್ದು, ಅದರಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವ ಕಾರಣ ಅವುಗಳನ್ನು ತೆಗೆದು ಹಗ್ಗ ಅಳವಡಿಸಲು ಸೂಚಿಸಲಾಗಿದೆ.
ಡೆಂಗ್ಯೂ ಬಗ್ಗೆ ಪ್ರತೀ ಶಾಲೆಗಳಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ್ ಸಿಇಒ, ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸಿ ಆರೋಗ್ಯ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಆದೇಶಿಸಿದ್ದಾರೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಾರ್ವ ಸರ್ವೆ ನಡೆಸಲಾಗುತ್ತಿದ್ದು, ಜಿಲ್ಲೆಯಷ್ಟೇ ಅಲ್ಲದೆ ಹೊರಜಿಲ್ಲೆ, ರಾಜ್ಯಗಳಿಂದ ಬರುವವರಲ್ಲಿಯೂ ಡೆಂಗ್ಯೂ ಲಕ್ಷಣ ಕಂಡುಬರುತ್ತಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
2024ರ ಜನವರಿಯಿಂದ ಈವರೆಗೂ ಡೆಂಗ್ಯೂ ಸಾಧ್ಯತ ಜ್ವರ ಪ್ರಕರಣ 1,414ಗಳಲ್ಲಿ 1,350 ಮಂದಿಯ ರಕ್ತದ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗ ಕಳುಹಿಸಲಾಗಿದೆ. ಅದರಲ್ಲಿ 187 ಡೆಂಗ್ಯೂ ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಔಷಧಗಳ ದಾಸ್ತಾನಿದೆ. ಸಾಮಾನ್ಯ ಜ್ವರ ಬಂದರೂ ನಿರ್ಲಕ್ಷಿಸದೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಮನೆಯ ಸುತ್ತಲು ಹಾಗೂ ಅಂಗಡಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸರ್ಜನ್ ಅಶೋಕ್ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಡೆಂಗ್ಯೂ ಪ್ರಕರಣ ಕಳೆದ ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದ್ದು, ಇದುವರೆಗೆ 182 ಪ್ರಕರಣಗಳು ದೃಢಪಟ್ಟಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಡೆಂಗ್ಯೂ ಪ್ರಕರಣಗಳನ್ನು ನಿರ್ವಹಿಸಲು ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆಯಲ್ಲಿ ಪ್ರಕರಣ ವಾರ್ಡ್ಗಳನ್ನು ಮೀಸಲಿಟ್ಟಿಲ್ಲ. ಪ್ರಕರಣದ ಗಂಭೀರತೆಯನ್ನು ಅರಿತು ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ 4 ಮಂದಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 20 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಒಟ್ಟು 41 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಈವರೆಗೆ 2,099 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶಂಕಿತ 292 ಪ್ರಕರಣಗಳನ್ನು ಗುರುತಿಸಿದ್ದು, ಅವರಲ್ಲಿ 182 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯ ಒಟ್ಟು 125 ಹಾಸಿಗೆಗಳಲ್ಲಿ ವಿವಿಧ ರೋಗ ಲಕ್ಷಣಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚುವರಿ ರೋಗಿಗಳು ಬಂದರೆ ಜಿಲ್ಲಾಸ್ಪತ್ರೆಯ ಶಿಫಾರಸ್ಸಿನ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.