ಮಂಗಳೂರು, ಜು.05(DaijiworldNews/AA): ತಲಪಾಡಿ ಟೋಲ್ ಗೇಟ್ ಸುತ್ತಮುತ್ತ ನಿರ್ಮಿಸಲಾಗಿದ್ದ ಅಂಗಡಿಗಳನ್ನು ತೆರವುಗೊಳಿಸಲು ನವಯುಗ ಉಡುಪಿ ಟೋಲ್ ವೇ ಖಾಸಗಿ ಲಿಮಿಟೆಡ್ ಇಂದು ಮುಂದಾಗಿದೆ. ಆದರೆ, ಸ್ಥಳೀಯರು ಹಾಗೂ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಾಚರಣೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಅದರಂತೆ ಟೋಲ್ ಪ್ಲಾಜಾ ಅಧಿಕಾರಿಗಳು ಜುಲೈ 20ರೊಳಗೆ ಅಂಗಡಿಗಳನ್ನು ತೆರವುಗೊಳಿಸಲು ಗಡುವು ನೀಡಿದ್ದಾರೆ. ಅಂಗಡಿಗಳನ್ನು ಜುಲೈ 20ರೊಳಗೆ ತೆರವುಗೊಳಿಸದೇ ಇದ್ದಲ್ಲಿ ನೆಲಸಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.




2024ರ ಮಾರ್ಚ್ ನಲ್ಲಿ ಕುಂದಾಪುರದಿಂದ ತಲಪಾಡಿವರೆಗಿನ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದೇಶದ ಅನುಸಾರ ರಸ್ತೆ ಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳು ಮತ್ತು ಗಾಡಿಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಖಾಲಿ ಮಾಡದವರಿಗೆ ಮಾರ್ಚ್ ನಲ್ಲಿ ಎನ್ಹೆಚ್ಎಐ ನೋಟಿಸ್ ಕೂಡ ನೀಡಿತ್ತು. ನೋಟಿಸ್ ನೀಡಿದ ಬಳಿಕವೂ ಕೆಲವರು 3 ತಿಂಗಳು ಕಳೆದರೂ ಅಂಗಡಿ ತೆರವುಗೊಳಿಸಿಲ್ಲ. ಇನ್ನು ಕೆಲವರು ಅಂಗಡಿಯನ್ನು ಬಾಡಿಗೆಗೆ ನೀಡಿದ್ದಾರೆ. ಇನ್ನು ಕೆಲವರು ಲಕ್ಕಾಂತರ ರೂಪಾಯಿಗೆ ಅಂಗಡಿಯನ್ನು ಮಾರಾಟ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ನವಯುಗ ಉಡುಪಿ ಟೋಲ್ವೇ ಕಂಪನಿಯ ಹಿರಿಯ ವ್ಯವಸ್ಥಾಪಕ ತಿಮ್ಮಯ್ಯ ಅವರು, ಎಸ್ಸಿ ಆದೇಶದಂತೆ ಹೆದ್ದಾರಿ ಪಕ್ಕದ ರಸ್ತೆ ಬದಿ ವ್ಯಾಪಾರಿಗಳು ಖಾಲಿ ಮಾಡಬೇಕು. ಏಪ್ರಿಲ್ ತಿಂಗಳಲ್ಲೇ ಈ ಕಾರ್ಯಾಚರಣೆ ನಡೆಯಬೇಕಿತ್ತು. ಆದರೆ, ಮಾನವೀಯ ನೆಲೆಯಲ್ಲಿ ವಿಳಂಬವಾಯಿತು. ಈಗ ಜುಲೈ 20 ಅಂತಿಮ ಗಡುವು ನೀಡಲಾಗಿದೆ. ಅಷ್ಟರೊಳಗೆ ಅಂಗಡಿಗಳನ್ನು ತೆರವು ಮಾಡದಿದ್ದರೆ ಅಂಗಡಿಗಳನ್ನು ನೆಲಸಮ ಮಾಡುತ್ತೇವೆ. ಇದು ಎಸ್ಸಿ ಆದೇಶವಾಗಿದ್ದು, ಹೆದ್ದಾರಿಯಿಂದ 60 ರಿಂದ 90 ಅಡಿ ಅಂತರದಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವು ಮಾಡಲಾಗುತ್ತದೆ. ಎರಡು ಬಾರಿ ನೋಟಿಸ್ ನೀಡಲಾಗಿದೆ. ಇಂದು ನಾವು ಅಂತಿಮ ಗಡುವನ್ನು ನೀಡಿದ್ದೇವೆ. ಸುಮಾರು 150 ಪುಟಾಣಿ ಅಂಗಡಿ ಮಾಲೀಕರು ಮೂರನೇ ವ್ಯಕ್ತಿಗಳಿಗೆ ನೀಡಿದ್ದಾರೆ. ಇನ್ನು ಕೆಲವರು ಸಣ್ಣಪುಟ್ಟ ಅಂಗಡಿಗಳನ್ನು ಒಂದರಿಂದ ಮೂರು ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ವಿನ್ಯಾಸದ ಅಡಿಯಲ್ಲಿ ಬರುವ ಎಲ್ಲಾ ಕೆಲಸಗಳ ಗುತ್ತಿಗೆಯನ್ನು ನಮ್ಮ ಕಂಪನಿ ತೆಗೆದುಕೊಂಡಿದೆ. ಹೆದ್ದಾರಿ ಬದಿಯ ಬೀದಿ ದೀಪಗಳನ್ನು ಎಲ್ಇಡಿಗೆ ಪರಿವರ್ತಿಸಲಾಗುವುದು. ಮಳೆಗಾಲದ ನಂತರ ಸರ್ವೀಸ್ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಯಲಿದೆ. ಅಂಡರ್ಪಾಸ್ ಗುತ್ತಿಗೆ ಕಂಪನಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎನ್ಹೆಚ್ಎಐಗೆ ಸಾರ್ವಜನಿಕರ ದೂರುಗಳನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದರು.
ಗಡಿನಾಡು ರಕ್ಷಣಾ ವೇದಿಕೆ ಸಿದ್ದೀಕ್ ತಲಪಾಡಿ ಮಾತನಾಡಿ, ತಲಪಾಡಿ ಪ್ಲಾಝಾ ಬಳಿ ಮಾರಾಟಗಾರರನ್ನು ಬಲವಂತವಾಗಿ ಖಾಲಿ ಮಾಡುವ ಯತ್ನ ನಡೆದಿದೆ. ಕಾಲಾವಕಾಶ ಕೇಳಿದ್ದೇವೆ. 22 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಹಾಲಿನ ಅಂಗಡಿ ಇದೆ. ಆ ಅಂಗಡಿ ತೆರವು ಮಾಡಬಾರದು. ಇತರೆ ಅಂಗಡಿಗಳನ್ನು ತೆರವು ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ಅಂಗಡಿಗಳನ್ನು ತೆರವು ಮಾಡುವಲ್ಲಿ ಇಲಾಖೆ ಯಾವುದೇ ತಾರತಮ್ಯ ಮಾಡಬಾರದು. ಕಾನೂನು ಎಲ್ಲರಿಗೂ ಸಮಾನ ಎಂಬುದನ್ನು ಕಾರ್ಯಾಚರಣೆಯಲ್ಲಿ ತೋರಿಸಬೇಕು. ಕೆಲವರು ಸರ್ಕಾರಿ ಜಮೀನಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅಂತಹ ಅಂಗಡಿಗಳ ವಿರುದ್ಧವೂ ಕಾರ್ಯಾಚರಣೆ ನಡೆಯಬೇಕು ಎಂದು ತಿಳಿಸಿದರು.