ಮಂಗಳೂರು , ಜು. 09(DaijiworldNews/AK):ಮಂಗಳವಾರ ಮುಂಜಾನೆ 3.30ರ ಅವಧಿಯಲ್ಲಿ 4 ಮಂದಿ ದರೋಡೆಕೋರರ ತಂಡ ಉರ್ವ ಕೊಟ್ಟಾರದ ಬಳಿಯಿರುವ ಮನೆಗೆ ನುಗ್ಗಿ ಕಿಟಕಿ ಕತ್ತರಿಸಿ ದರೋಡೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.








ಕೋಟೆಕಣಿ ಒಂದನೇ ಕ್ರಾಸ್ ನ ಕರೀಷ್ಮಾ ಎನ್ನುವ ಮನೆಯಲ್ಲಿ ದರೋಡೆ ನಡೆದಿದೆ. ವಿಕ್ಟರ್ ಮೆಂಡೋನ್ಸಾ (71) ಪ್ಯಾಟ್ರಿಷಾ ಮೆಂಡೋನ್ಸಾ (60) ದಂಪತಿಗಳಿಬ್ಬರು ಮಾತ್ರ ಮನೆಯಲ್ಲಿ ಉಳಿದಿದ್ದರು, ಮಕ್ಕಳಿಬ್ಬರು ವಿದೇಶದಲ್ಲಿದ್ದಾರೆ.
ಬೆಡ್ ರೂಂನ ಕಿಟಿಕಿ ಕಟ್ ಮಾಡಿಕೊಂಡು ರಾತ್ರಿ 1.45 ರಿಂದ ನಾಲ್ಕು ಗಂಟೆಯ ವರೆಗೆ ದರೋಡೆ ಮಾಡಿದ್ದಾರೆ. ದಂಪತಿಗಳಿಬ್ಬರಿಗೂ ಹೊಡೆದಿರುವ ಕಾರಣ ಇಬ್ಬರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮನೆಯವರಿಗೆ ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಆರೋಪಿಗಳು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಬಳಿಕ ಮನೆ ಮಾಲೀಕರ ಕಾರು ಮೂಲ್ಕಿಯಲ್ಲಿ ಪತ್ತೆಯಾಗಿದೆ.
ಹೆಜಮಾಡಿ ಟೋಲ್ ಗೇಟ್ ಮುನ್ನ ಕಾರು ನಿಲ್ಲಿಸಿ ಅವರ ಕಾರಿನಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ದರೋಡೆಗೈದ ಸೊತ್ತುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ.
ಕಾರಿನೊಳಗೆ ಮೊಬೈಲ್ ಒಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎಂದು ತಿಳಿದು ಬಂದಿಲ್ಲ. ಪೊಲೀಸರ ಮಾಹಿತಿ ಪ್ರಕಾರ ಇದು ದರೋಡೆಕೋರರ ಮೊಬೈಲ್ ಅವಸರದಲ್ಲಿ ಕಾರಿನಲ್ಲೇ ಬಾಕಿಯಾಗಿರುವ ಸಾಧ್ಯತೆ ಇದೆ. ಉರ್ವ ಠಾಣೆಯ ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.