ಕಾಪು, ಜು. 15(DaijiworldNews/AA): ಉಡುಪಿ ಮತ್ತು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ದೈವಸ್ಥಾನಗಳಲ್ಲಿ ಕಾಣಿಕೆ ಡಬ್ಬಿಗೆ ಕನ್ನ ಹಾಕಿದ ಕಳ್ಳನೋರ್ವ ಕಳುವು ಮಾಡಿದ 24 ಗಂಟೆಯೊಳಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ನವ ನಗರ ಐಟಿಐ ಕಾಲೇಜು ಬಳಿ ನಿವಾಸಿ ಮುದುಕಪ್ಪ ಬಾಳಪ್ಪ ಬಿದರಿ (23) ಕಳವುಗೈದ ಆರೋಪಿ.
ಆರೋಪಿಯು ಜು. 4 ರಾತ್ರಿ ಮತ್ತು ಜು. 5ರ ಮುಂಜಾನೆಯ ನಡುವೆ ಉಡುಪಿಯ ಕಸ್ತೂರ್ಬಾ ನಗರದ ಡಯಾನ ಥಿಯೇಟರ್ ಮುಂಭಾಗದಲ್ಲಿರುವ ಚಿಟ್ಪಾಡಿ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಸಂಬಂಧಪಟ್ಟ ಮತ್ತು ಜು. 6ರಂದು ರಾತ್ರಿ ಕಟಪಾಡಿ ಫಾರೆಸ್ಟ್ಗೇಟ್ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳವುಗೈದಿದ್ದಾನೆ. ಆರೋಪಿಯು ಕಳವುಗೈದಿವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ದೈವಸ್ಥಾನದ ಆಡಳಿತ ಮಂಡಳಿಗಳು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದವು.
ಕಾಣಿಕೆ ಡಬ್ಬ ಕಳವು ಸಂಬಂಧ ದೈವಸ್ಥಾನದ ಆಡಳಿತ ಮಂಡಳಿಯು ಜು. 6ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ದೈವ ದರ್ಶನ ನಡೆಸಿ, ದೈವದ ಬಳಿ ಉಯಿಲು ನೀಡಿತ್ತು. ಈ ಸಂದರ್ಭ 24 ಗಂಟೆಯೊಳಗೆ ಕಳ್ಳನನ್ನು ತೋರಿಸಿಕೊಡುತ್ತೇನೆ ಎಂಬ ಅಭಯವನ್ನು ದೈವವು ನೀಡಿತ್ತು.
ಜು. 7ರಂದು ಬೆಳಗ್ಗೆ ಆರೋಪಿ ಉಡುಪಿ ಕೆಎಸ್ ಆರ್ಟಿಸಿ ನಿಲ್ದಾಣದ ಬಳಿ ಮಲಗಿದ್ದು, ಅಲ್ಲಿಗೆ ಪ್ರಯಾಣಿಕರೋರ್ವರನ್ನು ಬಿಡಲು ಬಂದಿದ್ದ ಚಿಟ್ಪಾಡಿ ಕುಕ್ಕಿಕಟ್ಟೆ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರೋರ್ವರು ಬೆಳಗ್ಗೆ 8 ಗಂಟೆಯವರೆಗೂ ಬಸ್ ನಿಲ್ದಾಣದಲ್ಲಿ ಯುವಕ ನೋರ್ವ ನಿದ್ದೆ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಆತನ ಹತ್ತಿರ ಹೋಗಿ ಗಮನಿಸಿದಾಗ ಆತ ಕಾಣಿಕೆ ಡಬ್ಬಿ ಕಳವು ಮಾಡಿದಾತನನ್ನೇ ಹೋಲುತ್ತಿದ್ದ. ಹೀಗಾಗಿ ಈ ಬಗ್ಗೆ ತಕ್ಷಣ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಗಸ್ತು ನಿರತ ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ತಾನು ಚಿಟ್ಪಾಡಿ ಮತ್ತು ಕಟಪಾಡಿಯಲ್ಲಿನ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ದೊಡ್ಡಣ್ಣಗುಡ್ಡೆ ಮತ್ತು ಬೈಲೂರು ದೈವಸ್ಥಾನದ ಕಾಣಿಕೆ ಡಬ್ಬಿಯನ್ನೂ ಕಳವು ಮಾಡಿರುವುದಾಗಿ ಹೇಳಿದ್ದಾನೆ.