ಬೆಳ್ತಂಗಡಿ, ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯ ಕಟ್ಟೆ ಬಳಿಯ ಬಸ್ ನಿಲ್ದಾಣ ಕುಸಿದಿದೆ.

ಅದೃಷ್ಟವಶಾತ್ ಬಸ್ ನಿಲ್ದಾಣದಲ್ಲಿ ಯಾರೂ ಇಲ್ಲದ ಕಾರಣ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ. ಇನ್ನು ಬೆಳ್ತಂಗಡಿ ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿತ, ಮರಗಳು ಧರೆಗುರುಳುತ್ತಿರುವುದು, ಮನೆಗಳಿಗೆ ಹಾನಿಯುಂಟಾಗುವಂತಹ ಪ್ರಾಕೃತಿಕ ವಿಕೋಪಗಳು ಸಮಭವಿಸುತ್ತಿವೆ.
ಇನ್ನು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುಂದಿನ ಎರಡು ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.