ಮಂಗಳೂರು, ಜು. 16(DaijiworldNews/AA): ನಂತೂರು ಹಾಗೂ ಕೆಪಿಟಿ ಜಂಕ್ಷನ್ ನಲ್ಲಿ ಹೆದ್ದಾರಿ ಹದಗೆಟ್ಟಿದ್ದು, ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇತರ ಅಧಿಕಾರಿಗಳೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.












ಬಳಿಕ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, "ಭಾರೀ ಮಳೆಯಿಂದಾಗಿ ಕೆಪಿಟಿ ಮತ್ತು ನಂತೂರಿನಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ನಂತೂರು ಹಾಗೂ ಕೆಪಿಟಿಯಲ್ಲಿ ಪೇವರ್ ಬ್ಲಾಕ್ಸ್ ಗಳನ್ನು ಅಳವಡಿಸಿ ತಾತ್ಕಾಲಿಕ ಪರಿಹಾರ ಒದಗಿಸುವಂತೆ ಎನ್ಎಚ್ಎಐ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಗೆ ಸೂಚಿಸಿದ್ದೇನೆ" ಎಂದು ತಿಳಿಸಿದರು.
ನಂತೂರು ಮತ್ತು ಕೆಪಿಟಿ ಜಂಕ್ಷನ್ನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಸಂಚಾರ ದಟ್ಟಣೆ ಉಂಟಾಗುತ್ತಿದೆ. ಜೊತೆಗೆ ಈ ರೀತಿಯ ಹೊಂಡಗಳು ನಿರ್ಮಾಣವಾಗಿರುವುದರಿಂದ ವಾಹನಗಳ ಓಡಾಟಕ್ಕೆ ಅಪಾಯಕಾರಿಯಾಗಿದೆ.
ನಂತೂರು ಮತ್ತು ಕೆಪಿಟಿ ಜಂಕ್ಷನ್ಗಳು ನಿರಂತರವಾಗಿ ಹೆಚ್ಚುತ್ತಿರುವ ಗುಂಡಿಗಳಿಂದ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ. ಪಣಂಬೂರಿನಿಂದ ಸುರತ್ಕಲ್ ವರೆಗಿನ ರಸ್ತೆಯಲ್ಲಿಯೂ ಅಪಾಯಕಾರಿ ಹೊಂಡಗಳು ನಿರ್ಮಾಣವಾಗಿದ್ದು, ಇವು ಇತ್ತೀಚಿಗಿನ ಕೆಲ ಅಪಘಾತಗಳಿಗೆ ಕಾರಣವಾಗಿದೆ.