ಮಂಗಳೂರು, ಜು. 16(DaijiworldNews/AA): ರಾಷ್ಟ್ರ ಪ್ರಶಸ್ತಿ ವಿಜೇತ ರಂಗಕರ್ಮಿ ಸದಾನಂದ ಸುವರ್ಣ(92) ಅವರು ವಯೋಸಹಜ ಅಸ್ವಸ್ಥತೆಯಿಂದ ಮಂಗಳವಾರ ನಿಧನ ಹೊಂದಿದ್ದಾರೆ.

ಮೂಲ್ಕಿ ಮೂಲದ ಸದಾನಂದ ಸುವರ್ಣ ಅವರು ಹಲವು ವರ್ಷಗಳ ಕಾಲ ಮುಂಬಯಿನಲ್ಲಿ ವಾಸವಾಗಿದ್ದು ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್, ಉರುಳು ಮತ್ತಿತರ ಜನಪ್ರಿಯ ನಾಟಕ ರಚನೆ ಮಾಡಿದ ಹೆಗ್ಗಳಿಕೆ ಸುವರ್ಣ ಇವರದ್ದು.
ಸದಾನಂದ ಸುವರ್ಣ ಅವರ ಗುಡ್ಡೆದ ಭೂತ ಧಾರವಾಹಿ ದೂರದರ್ಶನದಲ್ಲಿ ಬಹಳ ಜನಮೆಚ್ಚುಗೆ ಗಳಿಸಿದ್ದು, ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಸಿಕ್ಕಿರುತ್ತದೆ. ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಶ ನೀಡಿದ್ದರು. ಇತರ ಭಾಷೆಯ ನಾಟಕಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದು ಕುರುಡು ಕಾಂಚನ, ಗುಡ್ಡೆದ ಭೂತ, ಮತ್ತು ಗೊಂದುಲು ಇವರ ಸ್ವರಚಿತ ನಾಟಕಗಳಾಗಿವೆ. ಧರ್ಮಚಕ್ರ, ಸೂಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್ ಮತ್ತು ಉರುಳು" ಅವರ ಅತ್ಯಂತ ಜನಪ್ರಿಯ ನಾಟಕಗಳು. ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಸಾಕ್ಷ ಚಿತ್ರ ವ್ಯಾಪಕವಾಗಿ ಮೆಚ್ಚುಗೆ ಗಳಿಸಿತ್ತು.
ಮಹಾರಾಷ್ಟ್ರದ ನಾಟಕ ಅಕಾಡೆಮಿಯಿಂದ ನಟನಾ ಡಿಪ್ಲೊಮಾ ಮತ್ತು ಛಾಯಾಗ್ರಹಣದಲ್ಲಿ ಪ್ರಮಾಣಪತ್ರ ಪಡೆದಿದ್ದರು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿನ 2023-24ನೇ ಸಾಲಿನ ಬಿ.ವಿ ಕಾರಂತ ಪ್ರಶಸ್ತಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟ್ನ ವಾರ್ಷಿಕ ಆತ್ಮಶಕ್ತಿ ಪ್ರಶಸ್ತಿ, 1977ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಸುವರ್ಣ ಅವರ ಘಟಶ್ರಾದ್ಧ ಪ್ರತಿಷ್ಠಿತ ಸ್ವರ್ಣ ಕಮಲ ಪ್ರಶಸ್ತಿ, ಸುವರ್ಣರ "ಕುಬಿ ಮಟ್ಟು ಇಯಾಲ" ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು.
'ಘಟಶ್ರಾದ್ಧ' ಸಿನಿಮಾ ಮೂಲಕ ಸದಾನಂದ ಸುವರ್ಣ ನಿರ್ಮಾಪಕರಾದ ಅವರು, ಈ ಸಿನಿಮಾಗೆ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದರು. ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಕೂಡ ದೊರೆತಿತ್ತು. ಜೊತೆಗೆ ದೂರದರ್ಶನದಲ್ಲಿ ಪ್ರಸಾರವಾದ ಅವರ ಗುಡ್ಡೆದ ಭೂತ ಧಾರವಾಹಿ ಜನರ ಮೆಚ್ಚುಗೆ ಗಳಿಸಿತ್ತು.
ಮುಂಬಯಿಯಲ್ಲಿ ಸುವರ್ಣರ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದ್ದು ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನವನ್ನೇ ಸ್ಥಾಪಿಸಿರುವರು. ಆ ಮೂಲಕ ವಾರ್ಷಿಕವಾಗಿ ದಿವಂಗತ ಡಾ| ಶಿವರಾಮ ಕಾರಂತರ ಸ್ಮರಣೆಯಲ್ಲಿ ಕನ್ನಡಿಗರ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಾಡಿಸುತ್ತಿದ್ದರು.
ಮೃತರ ಪಾಥಿವ ಶರೀರದ ಅಂತ್ಯಕ್ರಿಯೆಯು ನಾಳೆ ಸಾರ್ವಜನಿಕ ದರ್ಶನ ಹಾಗೂ ಗಣ್ಯರ ಸಂತಾಪ, ಅಂತಿಮ ದರ್ಶನದೊಂದಿಗೆ ಮಂಗಳೂರುನಲ್ಲಿ ನೆರವೇರಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.