ಬೆಂಗಳೂರು, ಮೇ24(Daijiworld News/SS): ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಫಲಿತಾಂಶದ ವಿಶ್ಲೇಷಣೆ ಮಾಡಲಾಗಿದೆ. ಇದಕ್ಕೂ ಮುನ್ನ ನಡೆದ ಅನೌಪಚಾರಿಕ ಸಭೆಯಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಪಕ್ಷದ ಹೀನಾಯ ಸಾಧನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಫಲಿತಾಂಶ ಬಂದ ನಂತರ ಉಭಯ ಪಕ್ಷಗಳ ನಾಯಕರು ನಿರಂತರ ಸಭೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಕುಸ್ತಿಯಲ್ಲಿ ಕಾಂಗ್ರೆಸ್ ಜೆಡಿಎಸ್ ದೋಸ್ತಿಗಳು ಮಖಾಡೆ ಮಲಗಿದ ನಂತರ ಈಗ ಉಭಯ ಪಕ್ಷಗಳು ಎಚ್ಚೆತ್ತುಕೊಂಡಿವೆ.
ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಎರಡೂ ಪಕ್ಷಗಳು ಮುಂದಾಗಿವೆ. ಆದರೆ, ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಬದಲಾವಣೆಯಾಗಲಿದ್ದಾರೆ. ಕಾಂಗ್ರೆಸ್ಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲು ಕುಮಾರಸ್ವಾಮಿ ಒಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ನಿಂದಲೇ ಯಾರಾದರೂ ಸಿಎಂ ಆಗಲಿ ಅಂತಾ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಕೆಲವು ಖಾಸಗಿ ವಾಹಿನಿಗಳು ವರದಿ ಮಾಡಿವೆ. ಆದರೆ ದೇವೇಗೌಡ, ಈಗಲೇ ಆತುರ ಬೇಡ. ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಹಾಗೂ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಎಚ್ಡಿ ಕುಮಾರಸ್ವಾಮಿ ರಾಹುಲ್ ಗಾಂಧಿಗೂ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ರಾಜಿನಾಮೆ ನೀಡುವ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ನಿಮ್ಮ ತಂದೆ ಎಚ್ಡಿ ದೇವೇಗೌಡರಿಗೂ ಬೇಸರವಾಗುತ್ತದೆ. ಈ ಬಗ್ಗೆ ಚರ್ಚೆ ಮಾಡಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳೋಣ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಸರ್ಕಾರ ಪತನವಾಗಬಾರದು ಎಂದು ತೀರ್ಮಾನವನ್ನು ಕೈಗೊಳ್ಳಲಾಗಿದೆ. ರಾಜ್ಯದ ಜನರಿಗೆ ನೀಡಿದ ಭರವಸೆಯಂತೆ ಸರ್ಕಾರ ಮುಂದುವರೆಯಬೇಕು. ಬಿಜೆಪಿ ವಲಯಕ್ಕೆ ಜಿಗಿಯಬಹುದು ಎಂದು ಅಂದಾಜಿಸಲಾಗಿರುವ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.