ಡೆಹ್ರಾಡೂನ್, ಮೇ24(Daijiworld News/SS): ಪ್ರಧಾನಿ ಮೋದಿ ಧ್ಯಾನಕ್ಕೆ ಮೊರೆ ಹೋದ ಗುಹೆ ಈಗ ಬಾರಿ ಸುದ್ದಿ ಮಾಡುತ್ತಿದೆ. ಸಮುದ್ರ ಮಟ್ಟದಿಂದ ಹನ್ನೆರಡು ಸಾವಿರ ಅಡಿ ಎತ್ತರದಲ್ಲಿ ಇರುವ ಕೇದಾರ್ ನಾಥ್ ಪುಣ್ಯ ಕ್ಷೇತ್ರದ ಗುಹೆ ಈಗ ಸಖತ್ ಫೇಮಸ್ ಆಗಿದೆ.
ಬಂಡೆಗಳನ್ನು ಕತ್ತರಿಸಿ ನಿರ್ಮಿಸಿರುವ ಈ ಗುಹೆ, ಮುಖ್ಯ ದೇಗುಲದ ಮುಂಚೆಯೇ ಇದೆ. ಬೆಳಕು, ಗುಹೆಗೆ ಹೊಂದಿಕೊಂಡಂತೆ ಶೌಚಾಲಯ, ಕಿಟಕಿ ಹಾಗೂ ಹತ್ತು ಅಡಿಗೂ ಎತ್ತರದಲ್ಲಿ ಸೀಲಿಂಗ್ ಇದೆ. ಈ ಗುಹೆಯಿಂದ ಪುರಾತನ ದೇಗುಲವು ಅದ್ಭುತವಾಗಿ ಕಾಣುತ್ತದೆ. ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡಿದ ಗುಹೆ ಈಗ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದ್ದು, ಆಧ್ಯಾತ್ಮಿಕ ಕೇಂದ್ರವಾಗಿ ಮಾರ್ಪಡುತ್ತಿದೆ.
ಮೋದಿ ತಂಗಿದ್ದ ‘ಧ್ಯಾನ ಕುಟಿಯಾ’ವನ್ನು ಅಲ್ಲಿನ ಜನರು ಈಗ ‘ಮೋದಿ ಗುಹೆ’ ಎಂದೇ ಕರೆಯುತ್ತಿದ್ದಾರೆ. ಈ ಗುಹೆಗೆ ಭೇಟಿ ನೀಡಲು ಸಾವಿರಾರು ಜನರು ಉತ್ಸುಕರಾಗಿದ್ದಾರೆ. ಇದಕ್ಕೆ ಆನ್ಲೈನ್ ಮೂಲಕ ಬುಕಿಂಗ್ ಆರಂಭಿಸಲಾಗುವುದು ಎಂದು ಜಿಎಂವಿಎನ್ ಕಾರ್ಯದರ್ಶಿ ಬಿ.ಎಲ್. ರಾನಾ ತಿಳಿಸಿದ್ದಾರೆ.
ಕೇದಾರನಾಥದ ಗುಹೆಗಳ ಉಸ್ತುವಾರಿಯನ್ನು ಜಿಎಂವಿಎನ್ ಎಂಬ ನಿಗಮ ನೋಡಿಕೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಇಲ್ಲಿನ ಗುಹೆಗಳನ್ನು ಅಭಿವೃದ್ಧಿಪಡಿಸಿ ಜನರ ಭೇಟಿಗೆ ಮುಕ್ತಗೊಳಿಸಲಾಗಿದೆ.