ನವದೆಹಲಿ, ಆ 16 (DaijiworldNews/MS): ಕೊಲ್ಕತ್ತಾದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಉಗ್ರ ಸ್ವರೂಪ ಪಡೆದುಕೊಂಡಿದೆ.
ವೈದ್ಯರ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ (IMA) ಬೆಂಬಲ ಸೂಚಿಸಿದ್ದು ಆಗಸ್ಟ್ 17ರಂದು 24 ಗಂಟೆಗಳ ಕಾಲ ದೇಶಾದ್ಯಂತ ಸರ್ಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಎಲ್ಲಾ ಒಪಿಡಿಗಳು ಮತ್ತು ಶಸ್ತ್ರಚಿಕಿತ್ಸೆಗಳು ಕಾರ್ಯನಿರ್ವಹಿಸುವುದಿಲ್ಲ ಹೇಳಿದೆ.
ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ ಅಂದರೆ 24 ಗಂಟೆಗಳ ಕಾಲ ಎಲ್ಲ ಸೇವೆಗಳಿಂದ ವೈದ್ಯರು ದೂರ ಉಳಿಯಲಿದ್ದಾರೆ ಎಂದು ಐಎಂಎ ಪ್ರಕಟಿಸಿದೆ. ಆದಾಗ್ಯೂ, ಒಪಿಡಿಗಳು ಬಂದ್ ಆಗಿದ್ದರೂ ಅಪಘಾತ ಮತ್ತು ತುರ್ತು ಸೇವೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಐಎಂಎ ಹೇಳಿದೆ.