ಬೆಂಗಳೂರು, ಆ 16 (DaijiworldNews/MS): ಜವಾಹರಲಾಲ್ ನೆಹರು ತಾರಾಲಯದಲ್ಲಿ ತಾಂತ್ರಿಕ ಆಧುನೀಕರಣಕ್ಕೆ ಅಗತ್ಯವಿರುವ ಪ್ರಸ್ತಾವನೆಯನ್ನ ಸಲ್ಲಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಸೂಚನೆ ನೀಡಿದರು.
ಇಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರ ಜೊತೆಯಲ್ಲಿ ಜವಾಹರಲಾಲ್ ನೆಹರು ತಾರಾಲಯಕ್ಕೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಡೆಸುತ್ತಿರುವ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಿದರು. ಜವಾಹರಲಾಲ್ ನೆಹರು ತಾರಾಲಯದಲ್ಲಿ ನಡೆಯುತ್ತಿರುವ ಯೋಜನೆಗಳು ಹಾಗೂ ಮುಂದಿನ ಪ್ರಸ್ತಾವನೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಪಡೆದರು.
ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಲು ಗಡವು:
ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಬಿಬಿಎಂಪಿ ವತಿಯಿಂದ ಜವಾಹರಲಾಲ್ ನೆಹರು ತಾರಾಲಯದ ಆವರಣದಲ್ಲಿ ಆಧುನಿಕ ಸಭಾಂಗಣ, ಕ್ಲಾಸ್ರೂಂ ಸೇರಿದಂತೆ ಹಲವು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಈ ಕಟ್ಟಡ ಕಾಮಗಾರಿಯನ್ನು ಸೆಪ್ಟೆಂಬರ್ 15 ರ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ, ಈ ಕಾಮಗಾರಿಯನ್ನ ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 22 ರಂದು ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಆಯೋಜಿಸುವಂತೆ ಸೂಚನೆ ನೀಡಿದರು.
ಜವಾಹರಲಾಲ್ ನೆಹರು ತಾರಾಲಯ ತಾಂತ್ರಿಕ ಆಧುನೀಕರಣ:
ಜವಾಹರಲಾಲ್ ನೆಹರು ತಾರಾಲಯದಲ್ಲಿ ಪ್ರಸ್ತುತ ಇರುವಂತಹ ಅನಲಾಗ್ ಪ್ರೋಜೆಕ್ಟ್ರಗಳ ತಾಂತ್ರಿಕ ಉಪಕರಣಗಳು ಬಹಳ ಹಳೆಯ ತಂತ್ರಜ್ಞಾನದ್ದಾಗಿವೆ. ಇವುಗಳನ್ನ ಬದಲಿಸುವ ಮೂಲಕ ನೂತನ ತಂತ್ರಜ್ಞಾನದ ಎಲ್.ಇ.ಡಿ ಪ್ರೊಜೆಕ್ಟರ್ಗಳನ್ನ ಅಳವಡಿಸುವುದು ಬಹಳ ಮುಖ್ಯವಾಗಿದೆ ಎಂದು ತಾರಾಲಯದ ನಿರ್ದೇಶಕರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ವಸತಿ ಶಾಲೆಗಳಿಗೆ ಟೆಲಿಸ್ಕೋಪ್ ಒದಗಿಸುವ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿ:
ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದ ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಬಾರಿಯ ಆಯವ್ಯದಲ್ಲಿ 883 ವಸತಿ ಶಾಲೆಗಳಲ್ಲಿ ಟೆಲಿಸ್ಕೋಪ್ ಒದಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಟೆಲಿಸ್ಕೋಪ್ಗಳನ್ನ ಖರೀದಿಸಲು ಈಗಾಗಲೇ ಟೆಂಡರ್ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಆದಷ್ಟು ಶೀಘ್ರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ನಗರದ ಜವಾಹರ ನೆಹರು ತಾರಾಲಯದ ಸಹಯೋಗದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು. ಆಯಾ ವಲಯವಾರು ತರಬೇತಿ ಶಿಬಿರಗಳಲ್ಲಿ ಟೆಲಿಸ್ಕೋಪ್ ಬಳಕೆ, ಅದರ ಮೂಲಕ ಅಧ್ಯಯನ ಮತ್ತು ಭೋಧನೆ ಹಾಗೂ ಅದನ್ನ ಸುಸ್ಥಿತಿಯಲ್ಲಿಡುವ ಬಗ್ಗೆ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್, ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ ಆರ್ ಗುರುಪ್ರಸಾದ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.