ಬೆಂಗಳೂರು, ಮೇ24(Daijiworld News/SS): ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನಕ್ಕೆ ಆಹ್ವಾನ ಬಂದರೆ ಖಂಡಿತ ಹೋಗುತ್ತೇನೆ ಎಂದು ಮಂಡ್ಯ ಜಿಲ್ಲೆಯ ನೂತನ ಸಂಸದೆ ಸುಮಲತಾ ಅಂಬರಿಷ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂದುಕೊಂಡಿದ್ದೆ. ಆದರೆ, ಇಷ್ಟೊಂದು ಬಹುಮತ ಗಳಿಸುತ್ತದೆ ಎಂದು ತಿಳಿದಿರಲಿಲ್ಲ. ಕಾಂಗ್ರೆಸ್ ನನಗೆ ಟಿಕೆಟ್ ಕೊಟ್ಟಿದ್ದರೆ, ಇವತ್ತು ಅವರಿಗೆ ಮತ್ತೊಂದು ಗೆಲುವು ಸಿಗುತ್ತಿತ್ತು. ನಾನು ಕಾಂಗ್ರೆಸ್ನಲ್ಲಿ ಇರಬೇಕಾ, ಬಿಜೆಪಿಗೆ ಹೋಗಬೇಕಾ ಎಂಬುವುದನ್ನು ಮಂಡ್ಯ ಜನ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
ನನ್ನ ಬಗ್ಗೆ ಟೀಕೆ ಮಾಡಿದ್ದು ಇಡೀ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಪರಿಣಾಮ ಬೀರಿದೆ. ನನ್ನ ಗೆಲುವಿನಲ್ಲಿ ಹೆಣ್ಣು ಮಕ್ಕಳ ಪಾಲೇ ಅಧಿಕವಾಗಿದೆ. ಶೇ. 50 ವೋಟ್ ಅವರಿಂದ ಆಗಿದೆ ಎಂಬುದರ ಮಾಹಿತಿ ಇದೆ. ಸಿಎಂ ಕುಮಾರಸ್ವಾಮಿ, ನಿಖಿಲ್ ಹಾಗೂ ದೇವೇಗೌಡರು ಯಾರು ಕೂಡ ಕರೆ ಮಾಡಿಲ್ಲ ಎಂದು ಹೇಳಿದರು.
ನಾನು ಸದ್ಯಕ್ಕಂತೂ ನಟನೆ ಮಾಡುವುದಿಲ್ಲ. ಜವಾಬ್ದಾರಿ ತುಂಬಾ ಇದೆ. ರಾಜಕಾರಣದಿಂದ ತುಂಬಾ ಕಲಿಯುವುದು ಇದೆ. ಸದ್ಯ ರಾಜಕಾರಣದಲ್ಲಿ ಏನು ಮಾಡಬಾರದು ಅನ್ನೋದನ್ನು ಕಲಿತಿದ್ದೀನಿ. ಮೋದಿ ಪ್ರಮಾಣ ವಚನಕ್ಕೆ ಆಹ್ವಾನ ಬಂದರೆ ಹೋಗುತ್ತೇನೆ. ಮಂಡ್ಯ ಜನತೆಗೆ ವಸತಿ ನಿಡಬೇಕೆಂಬುದು ಅಂಬಿ ಕನಸಾಗಿತ್ತು. ಅಂಬಿ ಕನಸನ್ನು ನಾನು ನನಸು ಮಾಡುತ್ತೇನೆ ಎಂದು ಹೇಳಿದರು.