ಬೆಂಗಳೂರು, ಆಗಸ್ಟ್ 16, (DaijiworldNews/TA) : ಜೆಡಿಎಸ್ ಬಿಜೆಪಿ ಪಕ್ಷಗಳು ನಿರಂತರವಾಗಿ ಕಾಂಗ್ರೆಸ್ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿದ್ದಂತೆ ಇದೀಗ ಕಾಂಗ್ರೆಸ್ ಖಡಕ್ ಆಗಿಯೇ ತಿರುಗೇಟು ನೀಡೋದಕ್ಕೆ ಶುರುಮಾಡಿದೆ. ಇದೀಗ ಕೇಂದ್ರ ರಾಜ್ಯ ಖಾಲೆ ಸಚಿವ ವಿ ಸೋಮಣ್ಣ ಅವರಿಗೆ ನೀಡಲಾಗಿದ್ದ ಕಚೇರಿಯನ್ನು ವಾಪಸ್ ಪಡೆದುಕೊಂಡಿದೆ.
ಹಳೇ ಪರಿವೀಕ್ಷಣಾ ಮಂದಿರದಲ್ಲಿ ಸೋಮಣ್ಣ ಕಚೇರಿ ಉಪಯೋಗಕ್ಕೆ ಪಡೆದುಕೊಂಡಿದ್ದರು. ಆದ್ರೆ, ಉದ್ಘಾಟನೆಗೆ ಸಿದ್ಧವಿರುವಾಗಲೇ ರಾಜ್ಯ ಸರ್ಕಾರ ಕಚೇರಿಯನ್ನು ವಾಪಸ್ ಪಡೆದುಕೊಂಡು ವಿ.ಸೋಮಣ್ಣ ಅವರಿಗೆ ಶಾಕ್ ನೀಡಿದೆ. ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೇ ಐಬಿಯನ್ನು ಸೋಮಣ್ಣ ಅವರ ಕಚೇರಿ ಉಪಯೋಗಕ್ಕೆ ನೀಡಲು ಅನುಮೋದನೆ ನೀಡಲಾಗಿತ್ತು. ಈ ಕಾರಣದಿಂದಲೇ ಕಛೇರಿಯನ್ನು ಸಿಂಗರಿಸಿ ಉದ್ಘಾಟನೆಗೂ ಮುಹೂರ್ತವನ್ನು ನಿಗದಿ ಮಾಡಲಾಗಿತ್ತು. ಆದ್ರೆ ಕಚೇರಿ ಉದ್ಘಾಟನೆಗೆ ಕೆಲವು ದಿನಗಳು ಇರುವ ವೇಳೆಗೆ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.
ಆಗಸ್ಟ್ 18ರ ಭಾನುವಾರದಂದು ಕಚೇರಿ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ, ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆ ಈ ಕೂಡಲೇ ಹಿಂಪಡೆಯುವಂತೆ ತುಮಕೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಸೂಚನೆ ನೀಡಿದ್ದಾರೆ ಎಂಬುವುದಾಗಿ ವರದಿಯಾಗಿದೆ.