ನವದೆಹಲಿ, ಆಗಸ್ಟ್ 16, (DaijiworldNews/TA) : ನವದೆಹಲಿಯ ಸದೈವ್ ಅಟಲ್ ಸ್ಮಾರಕದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರನೇ ಪುಣ್ಯತಿಥಿಯಂದು ಎನ್ಡಿಎ ಸರ್ಕಾರದ ಕೇಂದ್ರ ಸಚಿವರು ಮತ್ತು ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿದರು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರು ಸೇರಿದಂತೆ ಅನೇಕ ಗಣ್ಯರು ‘ಸದೈವ್ ಅಟಲ್’ನಲ್ಲಿ ಅವರ ಸ್ಮರಣೆಯನ್ನು ಗೌರವಿಸಿದರು.
ಗೌರವಾನ್ವಿತ ರಾಜಕಾರಣಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ,ಅಂದಿನ ಸಮಯದಲ್ಲಿ ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾಗಿದ್ದರು. 1990ರ ಸಮ್ಮಿಶ್ರ ಯುಗದಲ್ಲಿ ಮೈತ್ರಿಗಳನ್ನು ನಿರ್ಮಿಸುವ ಮೂಲಕ ಬಿಜೆಪಿಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಟಲ್ ಬಿಹಾರಿ ವಾಜಪೇಯಿ. ಬಿಜೆಪಿಯಿಂದ ಮೊದಲ ಪ್ರಧಾನಿಯಾದರು. ವಾಜಪೇಯಿ ಅವರು 2018ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.