ಬೆಂಗಳೂರು, ಆ. 16, (DaijiworldNews/AK) :ಕರ್ನಾಟಕದಲ್ಲಿ ಅತ್ಯಾಚಾರಿಗಳ ರಕ್ಷಣೆ, ಭ್ರಷ್ಟರ ರಕ್ಷಣೆ ನಡೆದಿದೆ. ಇದು ಕಾಂಗ್ರೆಸ್- ‘ಇಂಡಿ’ ಒಕ್ಕೂಟದ ಕಾರ್ಯತಂತ್ರ ಎಂದು ಜೆಪಿ ರಾಷ್ಟೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಮಲಿಕ್ ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸೇರಿ ಹಲವಾರು ಪ್ರಕರಣಗಳು ನಡೆದಿವೆ. ಇವುಗಳ ಕುರಿತು ರಾಹುಲ್, ಪ್ರಿಯಾಂಕ ವಾಧ್ರಾ ಯಾಕೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಕರ್ನಾಟಕದ್ದು ಡಬಲ್ ಟ್ರಬಲ್ ಸರಕಾರ. ಕರ್ನಾಟಕದಲ್ಲಿ ಕಟಾಕಟ್ ಲೂಟ್, ಝೂಟ್, ಪೂಟ್ ಸರಕಾರ ಇದೆ. 1947ರಿಂದ ಜೀಪ್ ಹಗರಣದಿಂದ ಆರೋಗ್ಯ ಕ್ಷೇತ್ರದ ವರೆಗೆ ಹಗರಣಗಳು ನಡೆದಿವೆ. ರಾಹುಲ್ ಗಾಂಧಿ ಕಟಾಕಟ್ ಲೂಟ್ ಗ್ಯಾರಂಟಿ ಯೋಜನೆ ಇದು. ಮೂಡ ನಿವೇಶನ ಹಗರಣದಡಿ 5 ಸಾವಿರ ಕೋಟಿಯ ಹಗರಣ ನಡೆದಿದೆ ಎಂದು ದೂರಿದರು.ಇದು ಪಿಕ್ ಪಾಕೆಟ್ ಸರಕಾರ.ಮೊಟ್ಟೆ ಹಗರಣವೂ ನಡೆಯುತ್ತಿದೆ. ಆ ಹಣವನ್ನೂ ಹೈಕಮಾಂಡ್ಗೆ ಕಳಿಸುವ ಸಾಧ್ಯತೆ ಇದೆ ಎಂದರು.
ಗ್ಯಾರಂಟಿ ಬಗ್ಗೆ ಮಾತನಾಡಿದ ಮಹಿಳೆಯರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರೇಗಾಡುವ ವಿಡಿಯೋ ವೈರಲ್ ಆಗಿದೆ. ಗ್ಯಾರಂಟಿ ವಿರುದ್ಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಮಾತನಾಡಿದ್ದಾರೆ, ನಾವು ದಿವಾಳಿ ಆಗುತ್ತೇವೆ ಎಂದು ಹೇಳಿದ್ದಾರೆ ಎಂದು ಶೆಹಜಾದ್ ಪೂನಾವಾಲಾ ತಿಳಿಸಿದರು.
ಲೂಟಿ ಮತ್ತು ಸುಳ್ಳು ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿದೆ. ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರವು ಜನರ ಮೇಲೆ ನ್ಯಾಯಸಮ್ಮತವಲ್ಲದ ಜಿಝಿಯಾ ತೆರಿಗೆ ಹಾಕಲು ಸರಕಾರ ಮುಂದಾಗಿದೆ. ಪೆಟ್ರೋಲ್, ಡೀಸೆಲ್, ವಿದ್ಯುತ್, ಬಸ್ ಪ್ರಯಾಣದರ, ನೀರಿನ ದರ, ಸಿನಿಮಾ ಟಿಕೆಟ್, ಸೇರಿ ಎಲ್ಲೆಡೆ ಹೆಚ್ಚುವರಿ ತೆರಿಗೆ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಎಸ್ಸಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಸುಮಾರು 25 ಸಾವಿರ ಕೋಟಿ ಹಣವನ್ನೂ ಬೇರೆಡೆಗೆ ವರ್ಗಾಯಿಸಿ ಲೂಟಿ ಮಾಡಲಾಗಿದೆ. ಇದು ಪಿಕ್ ಪಾಕೆಟ್ ಸರಕಾರ ಎಂದು ಅವರು ಟೀಕಿಸಿದರು.ಕರ್ನಾಟಕದಲ್ಲಿ 1200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಕುರಿತು ಕಾಂಗ್ರೆಸ್ಸಿಗರು ಮಾತನಾಡುವುದಿಲ್ಲ ಎಂದು ದೂರಿದರು.
ವಾಲ್ಮೀಕಿ ನಿಗಮದಡಿ ಅಧಿಕಾರಿಯೊಬ್ಬರು ಸಚಿವರ ಹೆಸರು ತಿಳಿಸಿ ಆತ್ಮಹತ್ಯೆ ಮಾಡಿದ್ದಾರೆ. 187 ಕೋಟಿಯ ಲೂಟಿ ನಡೆದಿದೆ. ಆದಿವಾಸಿಗಳಿಗಾಗಿ ತಮ್ಮ ಮನ ಮಿಡಿಯುವುದಾಗಿ ರಾಹುಲ್ ಗಾಂಧಿ ಹೇಳುತ್ತಾರೆ. ಇಲ್ಲಿ ಆದಿವಾಸಿಗಳ ಹಣ ಲೂಟಿ ಆಗುತ್ತಿದೆ. ಲಿಕ್ಕರ್, ಲ್ಯಾಂಬೊರ್ಗಿನಿ ಖರೀದಿಗೆ ಹಾಗೂ ಚುನಾವಣೆ ಖರ್ಚಿಗೆ ಈ ಹಣ ಬಳಸಿದ್ದಾರೆ. ಕಡಿಮೆ ಹಣದ (89 ಕೋಟಿ) ಭ್ರಷ್ಟಾಚಾರವನ್ನು ಸರಕಾರ ಒಪ್ಪಿಕೊಂಡಿದೆ. 120 ಕೋಟಿಯ ಅಕ್ಕಿ ಹಗರಣವೂ ಆಗುತ್ತಿದೆ. ಒಂದೊಂದು ಇಲಾಖೆ ಒಂದೊಂದು ದರದಲ್ಲಿ ಖರೀದಿ ಮಾಡುತ್ತಿದೆ ಎಂಬ ಮಾಹಿತಿ ಇದೆ ಎಂದು ವಿವರಿಸಿದರು.
ಟ್ರಾನ್ಸ್ಫರ್ ದಂಧೆಯೂ ನಡೆದಿದೆ. ದಲಿತ ಸಮುದಾಯದ ಸಬ್ ಇನ್ಸ್ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಂಗ್ರೆಸ್ ಶಾಸಕರನ್ನು ಹೆಸರಿಸಿದ್ದಾರೆ. ರಾಹುಲ್ ಗಾಂಧಿ ದಲಿತ್ ದಲಿತ್ ಎನ್ನುತ್ತಾರೆ. ಇಲ್ಲಿ ಮಾತ್ರ ಅದು ದಲ್ ಹಿತ್ (ನಿಶ್ಶಬ್ದ) ಆಗಿದೆ ಎಂದು ಟೀಕಿಸಿದರು.
ರಾಜೀನಾಮೆಗೆ ಆಗ್ರಹ: ಕೋಲ್ಕತ್ತ- ಕರ್ನಾಟಕ- ಕನೌಜ್ ನಡುವೆ ಇಂಡಿಯನ್ನು ಒಗ್ಗೂಡಿಸುವುದು ಅತ್ಯಾಚಾರಿಗಳನ್ನು ಬಚಾವೋ ಕಾರ್ಯಕ್ರಮ ಎಂದು ಟೀಕಿಸಿದರು.ಆರೇಳು ಸಾವಿರ ಜನರನ್ನು ಕಳಿಸಿ ಹಿಂಸೆ, ಆಸ್ಪತ್ರೆಯನ್ನು ಧ್ವಂಸ ಮಾಡಲಾಗಿತ್ತು. ಹೈಕೋರ್ಟಿಗೆ ಮಮತಾ ಬ್ಯಾನರ್ಜಿ ಬಗ್ಗೆ ವಿಶ್ವಾಸವಿಲ್ಲ. ಮಮತಾ ಬ್ಯಾನರ್ಜಿಗೆ ಮುಖ್ಯಮಂತ್ರಿಯಾಗಿ ಒಂದು ನಿಮಿಷವೂ ಮುಂದುವರೆಯಲು ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಕೆಲದಿನಗಳ ಹಿಂದೆ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಇಡೀ ದೇಶವನ್ನೇ ಕಂಗೆಡಿಸಿದೆ. ಈ ವಿಚಾರದಲ್ಲಿ ನಾವೆಲ್ಲರೂ ಯೋಚಿಸಬೇಕಿದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಲ ರಾಜ್ಯ ಪ್ರಾಯೋಜಿತ ಹಿಂಸಾಚಾರ:
ಆ.14ರ ಮಧ್ಯರಾತ್ರಿ ಮಹಿಳಾ ಪ್ರತಿಭಟನಾಕಾರರು, ವೈದ್ಯರ ಮೇಲೆ ಟಿಎಂಸಿ ಪ್ರಾಯೋಜಿತ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಸಾವಿರಾರು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ವೈದ್ಯೆಯ ಸ್ಥಿತಿ ಇತರರಿಗೂ ಆಗಲಿದೆ ಎಂದು ಮಹಿಳಾ ವೈದ್ಯರಿಗೆ ಬೆದರಿಕೆ ಒಡ್ಡಲಾಗಿದೆ ಎಂದು ನೋವಿನಿಂದ ನುಡಿದರು. ಇದು ಪಶ್ಚಿಮ ಬಂಗಾಲದ ರಾಜ್ಯ ಪ್ರಾಯೋಜಿತ ಹಿಂಸಾಚಾರ ಎಂದು ಶೆಹಜಾದ್ ಪೂನಾವಾಲಾ ಅವರು ಟೀಕಿಸಿದರು.