ಬೆಂಗಳೂರು, ಆ 17 (DaijiworldNews/MS): ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದಡಿ ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ 28 ಪ್ರಮುಖ ಬಿಜೆಪಿ ನಾಯಕರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ .
ಬೆಂಗಳೂರಿನಲ್ಲಿ ಜೂನ್ 20, 2023 ರಂದು ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ರೇಸ್ಕೋರ್ಸ್ ರಸ್ತೆಯ ಮೌರ್ಯ ವೃತ್ತದಲ್ಲಿ ಜಮಾಯಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನೀತಿಗಳು ಜನವಿರೋಧಿಯಾಗಿವೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕ ಮುನಿರಾಜು, ಮೇಲ್ಮನೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಒಟ್ಟಾರೆಯಾಗಿ, ಅನುಮತಿ ಇಲ್ಲದೇ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ 28 ಮುಖಂಡರ ಹೆಸರು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, "ಬಿಜೆಪಿ ನಾಯಕರು ಕಾನೂನು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವಿಲ್ಲ, ನಾವು ಪ್ರತಿಭಟನೆ ಮಾಡಿದರೂ ಪೊಲೀಸರ ಅನುಮತಿಯನ್ನು ಯಾವಾಗಲೂ ಪಡೆಯುತ್ತೇವೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು" ಎಂದು ಹೇಳಿದ್ದಾರೆ