ಬೆಂಗಳೂರು, ಆಗಸ್ಟ್ 17, (DaijiworldNews/TA) : ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಂದ ಮುಡಾ ವಿಚಾರಣೆ ವಚಾರವಾಗಿ ಆದೇಶ ಹೊರಬೀಳುತ್ತಿದ್ದಂತೆ ನಾಡಿನೆಲ್ಲೆಡೆ ಸಿಎಂ ಪರ ವಿರೋಧ ಮಾತುಗಳು ಕೇಳಿಬರುತ್ತಿದೆ.
ಇದರ ಜೊತೆಗೆ ಇದೀಗ ಬೆಂಗಳೂರು ನಗರದಲ್ಲಿ, ಮೈಸೂರಿನಲ್ಲಿ, ಚಿಕ್ಕಮಗಳೂರಿನಲ್ಲಿ ರಾಜ್ಯಪಾಲರ ವಿರುದ್ಧವಾಗಿ ಕುರುಬ ಸಮುದಾಯ ಪ್ರತಿಭಟನೆಗೆ ಮುಂದಾಗಿದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಅನುಮತಿ ಕೊಟ್ಟಿದ್ದೇ ತಡ ರಾಜ್ಯಪಾಲರ ವಿರುದ್ಧ ಕುರುಬ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಕುರುಬರ ಸಂಘದ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.
ಸಿಎಂ ತವರಾದ ಮೈಸೂರಿನಲ್ಲಿ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ಹಾಗೂ ಕೈಗೊಂಬೆ ಎಂದು ಘೋಷಣೆ ಕೂಗಲಾಗುತ್ತಿದೆ. ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ ಶಿವರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮೈಸೂರಿನ ನ್ಯಾಯಾಲಯದ ಮುಂಭಾಗ ಸೇರಿರುವ ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ಪಟ್ಟುಬಿಡದೆ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಸ್ಥಳದಲ್ಲಿ ಮಾನವ ಸರಪಳಿ ರಚನೆ ಮಾಡಿ ಅಂಗಿ ಬಿಚ್ಚಿ ಅರೆಬೆತ್ತಲೆಯಾಗಿ ಪ್ರದರ್ಶನ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ಇನ್ನು ಮತ್ತೊಂದೆಡೆ ಚಿಕ್ಕಮಗಳೂರಿನಲ್ಲೂ ಕುರುಬ ಸಮುದಾಯದ ಹಲವರು ಪ್ರತಿಭಟನೆ ಮಾಡುತ್ತಿದ್ದಾರೆ. ತರೀಕೆರೆ ಪಟ್ಟಣದಲ್ಲಿ ಟೈಯರ್ ಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಣದ ಗಾಂಧಿ ವೃತದಲ್ಲಿ ಟೈಯರ್ ಗೆ ಬೆಂಕಿ ಹಾಕಿ ಸಿಎಂ ವಿರುದ್ಧ ಇದು ಷಡ್ಯಂತರದ ಪ್ರಕರಣ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.