ಬೆಂಗಳೂರು, ಆ.17(DaijiworldNews/AA): ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಮೈತ್ರಿಪಕ್ಷಗಳ ಹೋರಾಟಕ್ಕೆ ದೊರೆತ ಜಯವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ನಾನು ಶುದ್ಧಹಸ್ತ ಎಂದು ಪದೇಪದೆ ಹೇಳುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲಿ ಎಂದಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್-ಬಿಜೆಪಿ ಜಂಟಿಯಾಗಿ ಪಾದಯಾತ್ರೆ ನಡೆಸಿತ್ತು. ನಮ್ಮ ಹೋರಾಟ ಸತ್ಯದ ಪರ ಎಂಬುದನ್ನು ರಾಜ್ಯಪಾಲರು ಕೈಗೊಂಡಿರುವ ಈ ಕ್ರಮ ಸಾಬೀತು ಪಡಿಸಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಗಾದೆ ಮಾತು ಈಗ ಅಕ್ಷರಶಃ ಸತ್ಯವಾಗಿದೆ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಕುಟುಂಬ ಅಕ್ರಮ ಎಸಗಿದೆ ಎಂಬುದು ಅಷ್ಟೇ ಸತ್ಯ ಎಂದರು.
ಸದ್ಯ ಸಂಕಷ್ಟದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಬೇರೆ ಯಾವುದೇ ಆಯ್ಕೆಯೇ ಇಲ್ಲ. ಅವರು ಸತ್ಯ ಒಪ್ಪಬೇಕು. ಅಕ್ರಮ ಅಂಗೀಕರಿಸಬೇಕು. ಕೂಡಲೇ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಾನು ಶುದ್ಧ ಎಂದು ಪದೇ ಪದೆ ಹೇಳುವ ಸಿದ್ದರಾಮಯ್ಯನವರು ಗೌರವಯುತವಾಗಿ ನಿರ್ಗಮಿಸಬೇಕು ಎಂದು ಹೇಳಿದರು.