ಚೆನ್ನೈ, ಆ.19 (DaijiworldNews/TA) : ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಕೇಶ್ ಪಾಲ್ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ರಾಕೇಶ್ ಪಾಲ್, ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಚೆನ್ನೈಗೆ ಬಂದಿದ್ದರು. ಈ ವೇಳೆ ಅವರು ಅಸ್ವಸ್ಥರಾಗಿದ್ದಾರೆ. ತಕ್ಷಣ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಕೇಶ್ ಪಾಲ್ ಅವರ ಅಕಾಲಿಕ ಮರಣಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ‘ರಾಕೇಶ್ ಪಾಲ್ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಸಮರ್ಥ ಮತ್ತು ಬದ್ಧ ಅಧಿಕಾರಿಯಾಗಿದ್ದು, ಅವರ ನಾಯಕತ್ವದಲ್ಲಿ ICG ಭಾರತದ ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ಬೃಹತ್ ದಾಪುಗಾಲುಗಳನ್ನು ಇಡುತ್ತಿತ್ತು. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು ಎಂಬುವುದಾಗಿ ಖಾತೆಯಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ. ನಂತರ ಅಂತಿಮ ದರ್ಶನವನ್ನೂ ಪಡೆದಿದ್ದಾರೆ.
ರಾಕೇಶ್ ಪಾಲ್ ಕಳೆದ ತಿಂಗಳಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ತಮ್ಮ ವಿಶೇಷ ಸೇವೆ ವಿಶಿಷ್ಟ ಸೇವಾ ಮೆಡಲ್ ಪಡೆದಿದ್ದರು. ಧಕ್ಷ ಅಧಿಕಾರಿಯನ್ನು ಕಳೆದುಕೊಂಡು ತಂಡ ದುಃಖಿತವಾಗಿದೆ.