ಬೆಂಗಳೂರು, ಆ.19 (DaijiworldNews/AK) : ಕಾಂಗ್ರೆಸ್ಸಿನವರು ರಾಜ್ಯಪಾಲರ ಪ್ರತಿಕೃತಿ ದಹಿಸಿದ್ದಾರೆ, ಅವರನ್ನು ನಿಂದಿಸಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋ಼ಷಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪ್ರಾಸಿಕ್ಯೂಷನ್ ಬಗ್ಗೆ ಕೋರ್ಟ್ ನಲ್ಲಿ ಪ್ರಶ್ನೆ ಮಾಡುವ ಹಕ್ಕಿದೆ, ಮಾಡಲಿ; ಆದರೆ, ಒಬ್ಬ ಹಿಂದುಳಿದ, ದಲಿತ ವರ್ಗದ ರಾಜ್ಯಪಾಲರ ಬಗ್ಗೆ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ. ಇದು ಖಂಡನಾರ್ಹ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರು ದಲಿತ ವರ್ಗಕ್ಕೆ ಸೇರಿದವರು, ಅತ್ಯಂತ ಹಿಂದುಳಿದ ವರ್ಗದಿಂದ ಬಂದವರು, ದಲಿತರ ಬಗ್ಗೆ ಕಾಳಜಿ ಇದೆ ಎಂದು ಹೇಳುತ್ತಾರೆ, ದಲಿತರ ಉದ್ಧಾರಕರು ತಾವೇ ಅಂತಾರೆ. ಕಾಂಗ್ರೆಸ್ ಪಕ್ಷದವರು ಇವತ್ತು ಈ ರೀತಿ ನಡೆದುಕೊಂಡಿದ್ದು ಗಂಭೀರವಾದ ವಿಚಾರ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರಿಗೆ ಬಾಂಗ್ಲಾದಲ್ಲಿ ಬಂದಂತಹ ಪರಿಸ್ಥಿತಿ ಬರಬಹುದು ಎಂದು ಕಾಂಗ್ರೆಸ್ಸಿನ ನಾಯಕರೊಬ್ಬರು ಹೇಳಿದ್ದಾರೆ ಎಂದು ಅವರು ಆಕ್ಷೇಪಿಸಿದರು. ಕಾನೂನು ಹೋರಾಟ ಮಾಡಿ ಆದರೆ ಹಿಂಸಾಚಾರ ಪ್ರತಿಭಟನೆ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಕಲ್ಲು ತೂರಿದ್ದಾರೆ, ಮೈಸೂರಲ್ಲಿ ಹಿಂಸಾಚಾರ ಆಗಿದೆ ಅನ್ನುವ ವರದಿಗಳು ಬರುತ್ತಿವೆ. ಇವೆಲ್ಲವುಗಳ ಕುರಿತು ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಸರ್ಕಾರ ನಿಮ್ಮದಿದೆ ಎಂದು ಕಾನೂನು ಕೈಗೆ ತೆಗೆದುಕೊಳ್ಳುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಯಾವ್ಯಾವ ಜಿಲ್ಲೆಗಳಲ್ಲಿ ಕಲ್ಲು ತೂರಾಟ ಆಗಿದೆಯೋ, ಹಿಂಸಾಚಾರ ಆಗಿದೆಯೋ ಅಲ್ಲಿನ ಪೊಲೀಸ್ ಅಧಿಕಾರಿಗಳು ಕೋರ್ಟಿನಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.