ಮಂಡ್ಯ, ಆ.21(DaijiworldNews/AA): ಪತ್ನಿಯ ಅನುಮಾನಾಸ್ಪದ ಸಾವಿಗೆ ಹೆದರಿದ ಗಂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಸ್ವಾತಿ (21) ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿ. ಮೋಹನ್ (26) ಆತ್ಮಹತ್ಯೆಗೆ ಶರಣಾದ ಪತಿ.
ನಿನ್ನೆ ರಾತ್ರಿ ಮೋಹನ್ ಮನೆಯಲ್ಲಿ ಪತ್ನಿ ಸ್ವಾತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇದಾದ ನಂತರ ಗಂಡ ಮೋಹನ್ ಹಾಗೂ ಆತನ ಪೋಷಕರು ಮನೆಯಿಂದ ನಾಪತ್ತೆಯಾಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಗಂಡನ ಶವ ಕೂಡ ಕೆರೆಯಲ್ಲಿ ಪತ್ತೆಯಾಗಿದೆ. ಪತ್ನಿಯ ಸಾವಿಗೆ ಹೆದರಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಸ್ವಾತಿಯ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಮೃತ ಯುವತಿಯ ಪೋಷಕರು ಗಂಡನ ಮನೆಯವರು ಸ್ವಾತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ವಾತಿ ಹಾಗೂ ಮೋಹನ್ ದಂಪತಿಗೆ ಒಂದುವರೆ ವರ್ಷದ ಹೆಣ್ಣು ಮಗುವಿದ್ದು, ದಂಪತಿಯ ಸಾವಿನಿಂದ ಅದು ಅನಾಥವಾಗಿದೆ.