ನವದೆಹಲಿ, ,ಆ.21(DaijiworldNews/AK): ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ನ್ಯಾಯ ಒದಗಿಸುವುದಕ್ಕಿಂತ ಅಪರಾಧ ಮರೆಮಾಚಲು ಹೆಚ್ಚಿನ ಪ್ರಯತ್ನಗಳನ್ನು ನಡೆಸಲಾಗುತ್ತದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಶಿಶುವಿಹಾರದಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅವರು, ಸಂತ್ರಸ್ಥ ಮಕ್ಕಳ ಪೊಷಕರು ದೂರು ನೀಡಿದ 12 ಗಂಟೆಗಳ ಬಳಿಕ ಎಫ್ಐಆರ್ ದಾಖಲು ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು.
ಇಂತಹ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಜನರು ಪ್ರತಿಭಟನೆ ಮಾಡಬೇಕೇ, ಸಾರ್ವಜನಿಕರು ನ್ಯಾಯಕ್ಕಾಗಿ ಬೀದಿಗಿಳಿಯುವವರೆಗೂ ಅವರಿಗೆ ನ್ಯಾಯ ನೀಡುವ ಮೊದಲ ಹೆಜ್ಜೆ ಇಡಲಿಲ್ಲ, ಏಕೆ ಎಫ್ಐಆರ್ ದಾಖಲಿಸಲು ಕಷ್ಟವಾಯಿತು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಹೆಚ್ಚಿನ ಬಲಿಪಶುಗಳು ಮಹಿಳೆಯರು ಮತ್ತು ದುರ್ಬಲ ವರ್ಗಗಳ ಜನರು. ಎಫ್ಐಆರ್ ದಾಖಲಿಸದಿರುವುದು ಸಂತ್ರಸ್ತರನ್ನು ನಿರುತ್ಸಾಹಗೊಳಿಸುವುದಲ್ಲದೆ, ಅಪರಾಧಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.