ಬೆಂಗಳೂರು, ಆ.22 (DaijiworldNews/AK) : ದಲಿತರ ವಿರುದ್ಧ ಕಾಂಗ್ರೆಸ್ ಪಕ್ಷದ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನಲ್ಲಿರುವ ದಲಿತ ಮುಖಂಡರು, ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ನಡೆದ ಬಿಜೆಪಿಯ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ದಲಿತ ಮುಖಂಡರಿಗೂ ಧಿಕ್ಕಾರವಿರಲಿ. ದಲಿತರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
ನಾನು ಹಿಂದುಳಿದ ವರ್ಗದ ನಾಯಕ. ಆದ್ದರಿಂದಲೇ ನನಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಈ ದೇಶದ ಪ್ರಧಾನಮಂತ್ರಿ ಯಾರು? ಅವರು ಕೂಡ ಹಿಂದುಳಿದವರು. ಅವರು ನಿಮ್ಮ ಥರ ಕರಿಕಾಗೆ ಅಲ್ಲ. ಅವರು ಕಳಂಕವೇ ಇಲ್ಲದವರು ಎಂದು ವಿವರಿಸಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ ಎಂದು ಪ್ರಕಟಿಸಿದ ಅವರು, ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ, ನಿಮ್ಮನ್ನು ಮನೆಗೆ ಕಳಿಸುವವರೆಗೆ ನಾವು ವಿರಮಿಸುವುದಿಲ್ಲ. ನಾವು ಹೋರಾಟದಿಂದ ವಿರಮಿಸುವುದಿಲ್ಲ ಎಂದು ತಿಳಿಸಿದರು.
ನಿಮ್ಮ ಮಂಡೆಯಲ್ಲಿ ಬುದ್ಧಿ ಉಂಟಾ ಮಾರಾಯರೇ?ಸರಕಾರಿ ಜಮೀನನ್ನು ನೀವು ಖರೀದಿಸಿದ್ದೀರಲ್ಲವೇ? ನಿಮ್ಮ ಮಂಡೆಯಲ್ಲಿ ಬುದ್ಧಿ ಉಂಟಾ ಮಾರಾಯರೇ? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಹಾಕಿದರು.