ಭೋಪಾಲ್,25(DaijiworldNews/AZM):ಆಟೋ ರಿಕ್ಷಾದಲ್ಲಿ ದನದ ಮಾಂಸವನ್ನು ಸಾಗಿಸುತ್ತಿದ್ದಾರೆಂದು ಆರೋಪಿಸಿ ಮುಸ್ಲಿಂ ಸಮುದಾಯದ ದಂಪತಿಗಳು ಸೇರಿ ಮೂವರಿಗೆ ಜನರ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಈ ವೀಡಿಯೋ ವೈರಲ್ ಆದ ಹಿನ್ನಲೆ ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ.
ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಗುಂಪಿನಲ್ಲಿ ಇದ್ದವರು, ಚಪ್ಪಲಿಯಿಂದ ಮಹಿಳೆಯ ತಲೆಗೆ ಪದೆಪದೇ ಹೊಡೆದಿದ್ದಾರೆ. ಮುಖಕ್ಕೆ ಸಣ್ಣ ಬಟ್ಟೆ ಕಟ್ಟಿಕೊಂಡಿದ್ದ ಹಲ್ಲೆಕೋರರು ಗೋರಕ್ಷಕರೆಂದು ಹೇಳಿಕೊಂಡಿದ್ದು, ಜೈ ಶ್ರೀರಾಮ್ ಘೋಷಣೆ ಕೂಗುವಂತೆಯೂ ಬಲವಂತಪಡಿಸಿದ್ದಾರೆ.ಹಲ್ಲೆಗೊಳಗಾದವರು ದಯನೀಯವಾಗಿ ಬೇಡಿಕೊಳ್ಳುತ್ತಿದ್ದರೂ, ಕನಿಕರ ಇಲ್ಲದ ಹಾಗೆ ಗುಂಪಿನಲ್ಲಿದ್ದವರು ದೊಣ್ಣೆ, ಟೈರ್ನಿಂದ ಅಮಾನವೀಯವಾಗಿ ಹಲ್ಲೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ಹಲ್ಲೆಗೊಳಗಾದ ಮೂವರ ಸಂಬಂಧಿಯೊಬ್ಬರು ಕೇಸು ದಾಖಲಿಸಿದ್ದು,‘‘ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಯೋಗೇಶ್, ದೀಪೇಶ್ ನಾಮ್ದೇವ್, ರೋಹಿತ್ ಯಾದವ್ ಹಾಗ ಶ್ಯಾಮ್ ಅವರನ್ನು ಬಂಧಿಸಿದ್ದಾರೆ.
ಈ ವಿಡಿಯೋ ನಾಲ್ಕು ದಿನಗಳ ಹಿಂದಿನದ್ದು. ಮತ್ತು ನಾಲ್ಕು ಜನರನ್ನು ಬಂಧಿಸಿ, ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗೆ ಕಳುಹಿಸಲಾಗಿದೆ. ಮತ್ತೊಬ್ಬನನ್ನು ಬಂಧಿಸಲಾಗಿದ್ದು, ಅವನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಲಲಿತ್ ಶಕ್ಯಾವರ್ ತಿಳಿಸಿದ್ದಾರೆ.
ಐವರ ವಿರುದ್ಧ ಐಪಿಸಿ ಸೆಕ್ಷನ್ 143, 148, 149, 341, 294, 323 ಹಾಗೂ 506ನ್ನು, ಸಶಸ್ತ್ರ ಕಾಯ್ದೆ 25ನ್ನು ವಿಧಿಸಲಾಗಿದೆ.
ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಮುಗ್ದ ಮುಸ್ಲಿಂ ಜನರ ಮೇಲೆ ದಾಳಿ ಮಾಡಿರುವುದು ಖಂಡನೀಯ. ಈ ಹಲ್ಲೆಕೋರರ ಮೇಲೆ ಕಮಲನಾಥ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.