ಬೆಂಗಳೂರು, ಆ.23(DaijiworldNews/AA): ನಮ್ಮಿಂದ ಸರ್ಕಾರ ಅಸ್ಥಿರವಾಗುವುದಿಲ್ಲ. ನಿಮ್ಮ ಜಗಳದಿಂದ ಸರ್ಕಾರ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ. ಬಿಜೆಪಿ ಯಾವ ಕಾರಣಕ್ಕೂ ನಿಮ್ಮ ಸರ್ಕಾರ ತೆಗೆಯುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ರಾಜ್ಯಪಾಲರ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಿಮ್ಮ ಮನೆಯನ್ನು ನೀವು ಮೊದಲು ಸರಿ ಮಾಡಿಕೊಳ್ಳಿ, ಬೇರೆಯವರ ಮೇಲೆ ಆರೋಪ ಬಿಡಿ. ಸಿಎಂ ಮೇಲೆ ಆರೋಪ ಬಂದಿದೆ. ಅವರು ಶುದ್ಧರಾಗಿ ಹೊರಗೆ ಬರಲಿ. ಪಾರದರ್ಶಕ ತನಿಖೆ ನಡೆಯಲಿ ಎಂದು ಹೇಳಿದರು.
ಸಿದ್ದರಾಮಯ್ಯ ಮೇಲೆ ನಮಗೆ ಯಾವ ಕೋಪವೂ ಇಲ್ಲ. ಬಿಜೆಪಿ ಸರ್ಕಾರ ಅಸ್ಥಿರಗೊಳ್ಳುತ್ತಿಲ್ಲ. ನಮಗೆ ವಿಪಕ್ಷ ಆಗಿ ಕೆಲಸ ಮಾಡಲು ಜನರು ಆದೇಶ ಕೊಟ್ಟಿದ್ದಾರೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ 58 ವರ್ಷ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದು, 92 ಬಾರಿ ಗಟ್ಟಿಮುಟ್ಟಾದ ಚುನಾಯಿತ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ಉರುಳಿಸಿದೆ. ಇಂಡಿಯಾ ಒಕ್ಕೂಟದಲ್ಲಿರುವ ಅನೇಕ ಪಕ್ಷಗಳ ಸರ್ಕಾರಗಳನ್ನು ಇವರೇ ತೆಗೆದಿದ್ದಾರೆ. ಇವರು ಈಗ ನಮಗೆ ರಾಜ್ಯಪಾಲರ ವಿಚಾರದಲ್ಲಿ ಬೋಧಿಸುತ್ತಿರುವುದು ಆಶ್ಚರ್ಯ ಎಂದು ಕಿಡಿ ಕಾರಿದ್ದಾರೆ.