ಬೆಳಗಾವಿ, ಮೇ 25 (Daijiworld News/MSP): ಮೋದಿ ನೀಡಿದ ಏಟಿಗೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನ್ನು ಮತ್ತೆ ಒಂದಾಗುವಂತೆ ಮಾಡಿದೆ ಎಂದು ಅರಣ್ಯ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಯಾವುದೇ ಮದ್ದು ನಾಟಿರಲಿಲ್ಲ. ಆದ್ರೆ ಇದೀಗ ನರೇಂದ್ರ ಮೋದಿ ಅವರು ಕೊಟ್ಟಿರುವಂತದ ಏಟಿನ ಔಷಧಿ ತಕ್ಷಣ ಫಲ ನೀಡಿದೆ. ಈಗ ನಾವೆಲ್ಲಾ ಒಂದಾಗಿದ್ದೇವೆ ಎಂದು ಜಾರಕಿಹೊಳಿ ಹೇಳಿದರು. ದೇಶದಲ್ಲಿ ಮೋದಿ ಅಲೆ ಇರುವಾಗ ಇನ್ನು ಬಾಕಿ ಉಳಿದ ನಾಲ್ಕು ವರ್ಷ ಭಿನ್ನಾಭಿಪ್ರಾಯ ಮರೆತು ಜತೆಯಾಗಿ ಹೋಗಬೇಕು ಎಡ ಬಲ ಎನ್ನುವುದನ್ನು ಮರೆತು ಎಲ್ಲರೂ ಒಟ್ಟಾಗಿ ಕಮಾಂಡರ್ ಹೇಳಿದ ಹಾಗೆ ಪರೇಡ್ ಮಾಡೋದು ನಮ್ಮ ಕೆಲಸ ಎಂದರು.
ಅಪರೇಷನ್ ಕಮಲಕ್ಕೆ ನಮ್ಮ ಪಕ್ಷದ ಶಾಸಕರು ಒಳಗಾಗೋದಿಲ್ಲ. ಬದಲಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ರಿವರ್ಸ್ ಆಪರೇಷನ್ ಮಾಡಲು ತಯಾರಿ ನಡೆಸಿಕೊಂಡಿದೆ ಎಂದರು.