ಯಾದಗಿರಿ, ಆ.26(DaijiworldNews/TA): ಕೃಷ್ಣಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರೂ, ಮೀನುಗಾರರು ಅಪಾಯವನ್ನು ಲೆಕ್ಕಿಸದೇ ಮೀನು ಹಿಡಿಯುವ ದುಸ್ಸಾಹಸ ಮಾಡುತ್ತಿದ್ದಾರೆ.
ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂ ನಿಂದ ಭಾರಿ ಪ್ರಮಾಣದ ನೀರು ಬಿಡುಗಡೆಯಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳ ಹಿನ್ನಲೆ ನೀರು ಬಿಡುಗಡೆ ಪ್ರಮಾಣ ಏರಿಕೆಯಾಗಿದೆ. ಈ ಕಾರಣದಿಂದ ಪ್ರವಾಹ ಭೀತಿ ಎದುರಾಗಿದೆ. ಡ್ಯಾಂನ 25 ಗೇಟ್ ತೆರೆದು ಕೃಷ್ಣಾ ನದಿಗೆ 1,20,800 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯಕ್ಕೆ 1,10,000 ಕ್ಯುಸೆಕ್ ನೀರು ಒಳಹರಿವಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 30.83 ಟಿಎಂಸಿ ನೀರು ಸಂಗ್ರಹವಿದೆ. ನದಿ ತೀರಕ್ಕೆ ತೆರಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಡ್ಯಾಂ ಮುಂಭಾಗದಲ್ಲಿಯೇ ಮೀನುಗಾರರು ಹುಚ್ಚಾಟ ನಡೆಸಿದ್ದಾರೆ. ಉಕ್ಕಿ ಹರಿಯುವ ನದಿಯಲ್ಲಿಯೇ ಮೀನು ಹಿಡಿಯುತ್ತಿದ್ದಾರೆ, ಅಪಾಯವನ್ನು ಲೆಕ್ಕಿಸದೇ ದುಸ್ಸಾಹಸ ಮಾಡುತ್ತಿದ್ದಾರೆ.