ಬೆಂಗಳೂರು, ಆ.26(DaijiworldNews/AA): ಕೊಲೆ ಆರೋಪಿ ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಕೇಸ್ನಲ್ಲಿ ಲೋಪ ಆಗಿರೋದು ಸತ್ಯ. ಈ ಬಗ್ಗೆ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಅತ್ಯಂತ ಪ್ರಾಮಾಣಿಕ ಮತ್ತು ಕಟ್ಟುನಿಟ್ಟಿನ ಅಧಿಕಾರಿಗಳನ್ನು ಇಂಥ ಸ್ಥಳಕ್ಕೆ ಹಾಕಬೇಕು. ಆಗ ಮಾತ್ರ ಈ ರೀತಿ ಘಟನೆಗಳು ಆಗೋದಿಲ್ಲ. ಯಾರು ಸೌಲಭ್ಯಗಳನ್ನು ಕೊಟ್ಟಿದ್ದಾರೆ ಅಂಥ ಗೃಹ ಮಂತ್ರಿಗಳಿಗೆ ಗೊತ್ತಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು ಹೇಳಿದರು.
ಕೆಳಹಂತದ ಸಿಬ್ಬಂದಿಯನ್ನು ಅಮಾನತು ಮಾಡಿದರೆ ಪ್ರಯೋಜನ ಇಲ್ಲ. ಅದರ ಬದಲೂ ಈ ಘಟನೆಯಲ್ಲಿ ಯಾವ ದೊಡ್ಡ ಅಧಿಕಾರಿ ಇದ್ರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಇಂತಹ ಘಟನೆ ಮುಂದೆ ನಡೆಯುವುದಿಲ್ಲ ಎಂದರು.
ಡಿಜಿ ಅವರಿಗೆ ಈ ವಿಚಾರ ಎಲ್ಲ ಗೊತ್ತಿರುವುದಿಲ್ಲ. ಆದರೆ ಅವರು ಪರಿಶೀಲನೆ ಮಾಡುತ್ತಿರಬೇಕಿತ್ತು ಅಧಿಕಾರಿಗಳನ್ನು ಕರೆದು ಎಚ್ಚರಿಕೆ ಮಾಡಬೇಕಿತ್ತು. ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ. ಈ ಘಟನೆ ಪುನರಾವರ್ತನೆ ಆಗದ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ. ಇದು ರಾಜ್ಯ ಸರ್ಕಾರದ ಹೊಣೆಯಲ್ಲ ಎಂದು ನುಡಿದರು.