ನವದೆಹಲಿ, ಮೇ25(Daijiworld News/SS): ಎರಡನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದಾರೆ. ಮತ್ತೊಮ್ಮೆ ದೇಶದ ಆಡಳಿತ ನಡೆಸಲು ಆಯ್ಕೆಯಾದ ಬಳಿಕ ನರೇಂದ್ರ ಮೋದಿ ಮೊದಲ ಸಲ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.
ಪ್ರಸ್ತುತ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಸಂಸದರ ಸಭೆಯಲ್ಲಿ ಭಾಗವಹಿಸಿರುವ ಮೋದಿ ಅವರು, ಭಾನುವಾರ ಸಂಜೆ ಗುಜರಾತ್ಗೆ ತೆರಳಿ ತಮ್ಮ ತಾಯಿಯನ್ನು ಭೇಟಿ ಮಾಡಲಿದ್ದಾರೆ. ಸೋಮವಾರ ಬೆಳಿಗ್ಗೆ ತಮ್ಮ ಕ್ಷೇತ್ರವಾದ ವಾರಣಾಸಿಗೆ ತೆರಳಲಿದ್ದಾರೆ. ತಮ್ಮನ್ನು ಗೆಲ್ಲಿಸಿದ ಜನರಿಗೆ ಅವರು ಕೃತಜ್ಞತೆ ಸಲ್ಲಿಸಲಿದ್ದಾರೆ.
ಗುಜರಾತ್ಗೆ ನಾಳೆ ಸಂಜೆ ಹೊರಡಲಿದ್ದು, ನನ್ನ ತಾಯಿಯ ಆಶೀರ್ವಾದ ಪಡೆದುಕೊಳ್ಳಲಿದ್ದೇನೆ. ನಾಡಿದ್ದು ಬೆಳಿಗ್ಗೆ ಕಾಶಿಗೆ ಹೋಗಲಿದ್ದೇನೆ. ನನ್ನ ಮೇಲಿನ ನಂಬಿಕೆಯನ್ನು ಮತ್ತೆ ಪ್ರದರ್ಶಿಸಿದ ಈ ಮಹಾನ್ ಭೂಮಿಗೆ ಧನ್ಯವಾದ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಎನ್ಡಿಎ ಸರ್ಕಾರದ ರಾಜೀನಾಮೆಯನ್ನು ಶುಕ್ರವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ ಮತ್ತು ಹೊಸದಾಗಿ ಪ್ರಮಾಣವಚನ ಸ್ವೀಕರಿಸುವವರೆಗೂ ಪ್ರಧಾನಿಯಾಗಿ ಮುಂದುವರಿಯುವಂತೆ ಸೂಚಿಸಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಸಚಿವರ ಸಮಿತಿ ಮತ್ತು ನರೇಂದ್ರ ಮೋದಿ ಅಧಿಕಾರದಲ್ಲಿ ಮುಂದುವರಿಯುವಂತೆ ರಾಷ್ಟ್ರಪತಿ ಮನವಿ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.