ಬೆಂಗಳೂರು, ಮೇ25(Daijiworld News/SS): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೈಸೂರಿನ ಹೋಟೆಲ್'ನಲ್ಲಿ ರಂಪಾಟ ಮಾಡಿದ್ದರು ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಇದು ಕಪೋಲಕಲ್ಪಿತ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆಯಲ್ಲಿ ಸೋತ ನಂತರ ನಿಖಿಲ್ ಮೈಸೂರಿನ ರ್ಯಾಡಿಸ್ ಬ್ಲೂ ಹೋಟೆಲ್ನಲ್ಲಿ ತಂಗಿದ್ದರು. ಈ ವೇಳೆ ಸೋಲಿನ ಬೇಸರದಿಂದ ಚೆನ್ನಾಗಿ ಮದ್ಯ ಸೇವಿಸಿ ಜೋರಾಗಿ ಗಲಾಟೆ-ರಂಪಾಟ ಮಾಡಿದ್ದರು. ಈ ವೇಳೆ ಹೋಟೆಲ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಎಷ್ಟೇ ಸಮಾಧಾನ ಪಡಿಸಿದರೂ ಅವರ ವಿರುದ್ಧವೂ ವಾಗ್ದಾಳಿ ನಡೆಸಿ ಗಲಾಟೆ ಮಾಡಿದ್ದರು. ಅಜ್ಜ ದೇವೇಗೌಡರ ವಿರುದ್ಧವೂ ಅವರು ಕೂಗಾಡಿದ್ದರು ಎಂದು ಕನ್ನಡ ದಿನಪತ್ರಿಕೆಯೊಂದು ವರದಿ ಪ್ರಕಟಿಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕನ್ನಡಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ. ನಿಖಿಲ್ ಚಾರಿತ್ರ್ಯ ವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿ ಎಂದು ತಿಳಿಸಿದ್ದಾರೆ.