ಬೆಂಗಳೂರು, ಆ.27(DaijiworldNews/AK): ಜಿಂದಾಲ್ಗೆ ಭೂಮಿ ಕೊಡಲು ಕಾಂಗ್ರೆಸ್ಸಿಗರು ಹಿಂದೆ ವಿರೋಧಿಸಿದ್ದು, ಈಗ ಕೊಡುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೂ, ಅವರ ಹೈಕಮಾಂಡಿಗೂ ದೊಡ್ಡ ಪ್ರಮಾಣದ ಮೊತ್ತ ಸಂದಾಯ ಆಗಿರಬಹುದು ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಂಶಯ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಿಂದಾಲ್ ಕಂಪೆನಿಗೆ ಸುಮಾರು 3,677 ಎಕರೆ ಭೂಮಿ ಕೊಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಅವರು ಆಗ್ರಹಿಸಿದರು. ಸಿದ್ದರಾಮಯ್ಯನವರೇ ನಿಮ್ಮ ಸಮಾಜವಾದ ಅಂದರೆ ಇದೇನಾ ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತದಲ್ಲಿ ಇದ್ದಾಗ ಈ ಪ್ರಸ್ತಾವನೆ ಬಂದಿತ್ತು. ನಾವೆಲ್ಲರೂ ಒಳಗಡೆಯೂ ವಿರೋಧ ಮಾಡಿದ್ದೆವು. ಕಾಂಗ್ರೆಸ್ಸಿನವರು ಬಹಿರಂಗವಾಗಿ ವಿರೋಧಿಸಿದ್ದರು. ಇದು ದೊಡ್ಡ ಪ್ರಮಾಣದ ಕಿಕ್ ಬ್ಯಾಕ್ ಎಂದು ನಮ್ಮ ಮೇಲೆ ಅವರು ಆರೋಪಿಸಿದ್ದರು ಎಂದು ವಿವರಿಸಿದರು. 1.22 ಲಕ್ಷಕ್ಕೆ ಭೂಮಿ ಕೊಡುವುದು ಎಂದರೇನು? ಎಂಬ ಮಾತನ್ನು ನಮ್ಮ ಮೇಲೆ ಆರೋಪಿಸಿದ್ದರು ಎಂದು ಹೇಳಿದರು.
ಈಗ ಆರೋಪಿಸಿದವರೇ ಭೂಮಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಎಷ್ಟು ಕಿಕ್ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನಿಸಲು ಬಯಸುವುದಾಗಿ ತಿಳಿಸಿದರು.ಕೈಗಾರಿಕೆ ಖಾತೆ ಸಚಿವರು ಈ ಕುರಿತು ಬಿಜೆಪಿ ಆಡಳಿತದಲ್ಲಿರುವಾಗಲೇ ನಿರ್ಧಾರ ಆಗಿತ್ತು ಎಂದು ತಿಳಿಸಿದ್ದಾರೆ. ಮಾನ್ಯ ಎಂ.ಬಿ.ಪಾಟೀಲರೇ, ನಮ್ಮ ಅವಧಿಯಲ್ಲಿ ಪ್ರಸ್ತಾಪ ಬಂದಿದ್ದು ನಿಜ. ನಮ್ಮಂಥ ಹಲವರು ವಿರೋಧಿಸಿದ್ದ ಕಾರಣಕ್ಕೆ ಪ್ರಸ್ತಾವವನ್ನು ಅಲ್ಲಿಗೇ ಕೈಬಿಟ್ಟಿದ್ದೆವು. ನೀವ್ಯಾಕೆ ಅದನ್ನು ಮಾಡುತ್ತೀರಿ? ಬಿಜೆಪಿ ಕಂಡರೆ ಆಗದವರು ಬಿಜೆಪಿ ನಿರ್ಧಾರವನ್ನು ಯಾಕೆ ಮುಂದುವರೆಸಬೇಕು ಎಂದು ಕೇಳಿದರು.