ಬೆಂಗಳೂರು, ಆ.27(DaijiworldNews/AA): ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವುದು ಸಾಬೀತಾಗಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಅವರು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಈಗ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡುವಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ದರ್ಶನ್ ಜೊತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳು ಬೇರೆ ಬೇರೆ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಕೋರ್ಟ್ ಆದೇಶ ಹೊರಡಿಸಿದೆ. ಆದೇಶ ಸಿಕ್ಕಿರುವುದರಿಂದ ಎಲ್ಲ ಆರೋಪಿಗಳ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗಿದೆ. ದರ್ಶನ್ ಶಿಫ್ಟ್ ಆಗಲಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ವ್ಯವಸ್ಥೆ ಇದೆ.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದು, ಪವನ್, ರಾಘವೇಂದ್ರ, ನಂದೀಶ್ ಅವರನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗುವುದು. ಜಗದೀಶ್ ನನ್ನು ಶಿವಮೊಗ್ಗ ಜೈಲಿಗೆ, ಧನರಾಜ್ ನನ್ನು ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗುವುದು. ವಿನಯ್ ನನ್ನು ವಿಜಯಪುರ ಜೈಲಿಗೆ, ನಾಗರಾಜ್ ನನ್ನು ಕಲಬುರಗಿ ಜೈಲಿಗೆ, ಲಕ್ಷ್ಮಣನನ್ನು ಶಿವಮೊಗ್ಗ ಜೈಲಿಗೆ, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಾಗುವುದು.
ಇನ್ನು ಉಳಿದ ಆರೋಪಿಗಳಾದ ಪವಿತ್ರಾ ಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲೇ ಮುಂದುವರಿಯಲಿದ್ದಾರೆ. ಈಗಾಗಲೇ ಆರೋಪಿಗಳಾದ ರವಿ, ಕಾರ್ತಿಕ್, ನಿಕಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿ ಉಳಿಯಲಿದ್ದಾರೆ.