ಕೋಲ್ಕತ್ತಾ, ಆ.28(DaijiworldNews/AA): ನಾನು ಯಾವುದೇ ಪ್ರತಿಭಟನಾಕಾರರನ್ನು ಬಂಧಿಸಲು ಬಯಸುವುದಿಲ್ಲ. ನಾವು ಹೆಚ್ಚಿನ ವೈದ್ಯರು ಸೇವೆಗೆ ಬರಲು ಬಯಸುತ್ತೇವೆ. ಬಿಜೆಪಿಯ ಬಂದ್ ಕರೆಯನ್ನು ಬಂಗಾಳ ಸರ್ಕಾರ ಬೆಂಬಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಹತ್ಯೆಯಂತಹ ಅಪರಾಧಗಳಿಗೆ ಒಂದೇ ಒಂದು ಸರಿಯಾದ ಶಿಕ್ಷೆ ಇದೆ. ಅದು ನೇಣುಗಂಬ. ಪ್ರತಿಪಕ್ಷ ಬಿಜೆಪಿಯು ಭೀಕರ ಹತ್ಯೆಯ ತನಿಖೆಯನ್ನು ಹಳಿತಪ್ಪಿಸಲು ಪ್ರಯತ್ನಿಸುತ್ತಿದೆ. ಬಂಗಾಳ ಸರ್ಕಾರವು 7 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಬಯಸಿದೆ. ಆದರೆ ಸಿಬಿಐ ಇಲ್ಲಿಯವರೆಗೆ ಪ್ರಕರಣವನ್ನು ಭೇದಿಸಿಲ್ಲ. ಅತ್ಯಾಚಾರ-ವಿರೋಧಿ ಕಾನೂನಿನ ಕುರಿತು ಬಂಗಾಳ ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಅಂಗೀಕರಿಸಲಿದೆ. ಹೊಸ ಕ್ರಿಮಿನಲ್ ಕೋಡ್ ಬಿಎನ್ಎಸ್ ಅತ್ಯಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ಹೊಂದಿಲ್ಲ ಎಂದು ಕಿಡಿಕಾರಿದ್ದಾರೆ.
ಅಪರಾಧದ ಬಗ್ಗೆ ತಪ್ಪು ಮಾಹಿತಿ ಹರಡಲು ಬಿಜೆಪಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ. ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯಕೀಯ ವಿದ್ಯಾರ್ಥಿನಿ ಕುಟುಂಬಕ್ಕೆ ಕೇಂದ್ರವು ನ್ಯಾಯ ಸಿಗುವುದನ್ನು ಬಯಸುವುದಿಲ್ಲ. ಈ ಪ್ರಕರಣದ ತನಿಖೆಯ ವೇಳೆ ಸಿಬಿಐ ಏನು ಕಂಡುಕೊಂಡಿದೆ ಎಂಬುದನ್ನು ಬಹಿರಂಗಪಡಿಸಬೇಕು. ಪ್ರತಿಭಟನಾ ನಿರತ ವೈದ್ಯರಿಗೆ ಕೆಲಸ ಪುನರಾರಂಭಿಸುವಂತೆ ಅವರು ಒತ್ತಾಯಿಸಿದರು.
ನಾವು ಈ ಬಂದ್ಗೆ ಬೆಂಬಲ ನೀಡುವುದಿಲ್ಲ. ನಮಗೆ ನ್ಯಾಯ ಬೇಕು ಆದರೆ ಬಿಜೆಪಿ ಇಂದು ಬಂದ್ಗೆ ಕರೆ ನೀಡಿದೆ. ಬಿಜೆಪಿಗೆ ನ್ಯಾಯ ಬೇಡ, ಅವರು ಬಂಗಾಳದ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ತನಿಖೆಯ ಹಳಿತಪ್ಪಿಸಲು ಬಿಜೆಪಿ ಸಂಚು ನಡೆಸುತ್ತಿದೆ ಎಂದಿದ್ದಾರೆ.