ನವದೆಹಲಿ,ಮೇ26(DaijiworldNews/AZM):ಮೇ 30ರಂದು ನರೇಂದ್ರ ಮೋದಿಯವರ ಪ್ರಮಾಣ ವಚನ ನಡೆಯುವ ಸಾಧ್ಯತೆ ಇದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರದಂದು ಸಂಸತ್ನಲ್ಲಿ ನಡೆದ ಎನ್ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಅವರನ್ನು ನಾಯಕನನ್ನಾಗಿ ಪ್ರಸ್ತಾಪ ಮಾಡಿದರು. ಹಿರಿಯ ಬಿಜೆಪಿ ಮುಖಂಡರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದರು. ಜೊತೆಗೆ, ಶಿವಸೇನೆ, ಜೆಡಿಯು, ಶಿರೋಮಣಿ ಅಕಾಲಿ ದಳ ಮೊದಲಾದ ಬಿಜೆಪಿ ಮಿತ್ರ ಪಕ್ಷಗಳ ಮುಖಂಡರು ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿದರು.
ಬಿಜೆಪಿಯ ಸರ್ವ ಸಂಸದರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂಸದೀಯ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಪ್ರಧಾನಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವಕ್ಕೆ ಬದ್ಧರಾಗಿದ್ದರು. ಇದರಿಂದಾಗಿ ನರೇಂದ್ರ ಮೋದಿ ಅವರು ಇನ್ನೂ 5 ವರ್ಷ ಕಾಲ ಪ್ರಧಾನಿಯಾಗಲು ಸಾಧ್ಯವಾಗಿದೆ. ಎಲ್ಲಾ ವರ್ಗಗಳ ಜನರು ಮೋದಿ ಮತ್ತು ಎನ್ಡಿಎಗೆ ಹೆಚ್ಚಿನ ಬಹುಮತ ನೀಡಿ ಆಶೀರ್ವದಿಸಿದ್ದಾರೆ. ಒಬ್ಬ ಬಡಕುಟುಂಬದಿಂದ ಬಂದ ವ್ಯಕ್ತಿಯು ಪ್ರಧಾನಿಯಾಗುವ ಹಂತಕ್ಕೇರಿದ್ದು ಪ್ರಜಾತಂತ್ರದ ವೈಶಿಷ್ಟ್ಯತೆಯಾಗಿದೆ” ಎಂದು ಬಣ್ಣಿಸಿದರು.
“ಈ ಚುನಾವಣೆಯಲ್ಲಿ ಜನರು ವಂಶಾಡಳಿತ ಹಾಗೂ ಜಾತಿ ಆಧಾರಿತ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಸರಕಾರದ ಕಾರ್ಯಸಾಧನೆ ಮತ್ತು ಅಭಿವೃದ್ಧಿ ಆಧಾರದ ಮೇಲೆ ಜನರು ಮತ ಹಾಕಿದ್ದಾರೆ” ಎಂದು ಈ ವೇಳೆ ಅಮಿತ್ ಶಾ ಅಭಿಪ್ರಾಯಪಟ್ಟರು.
ಆ ನಂತರ ನರೇಂದ್ರ ಮೋದಿ ಅವರು ಸಂಸದೀಯ ಪಕ್ಷಗಳ ಸಭೆಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರೂ ಸೇರಿ ದೇಶದ ಸಕಲ ಸಮುದಾಯದ ಏಳಿಗೆಗೆ ಶ್ರಮಿಸುವ ಗುರಿ ಇಟ್ಟುಕೊಳ್ಳಲು ಕರೆ ನೀಡಿದರು.