ಲಕ್ನೋ, ಆ.28(DaijiworldNews/AA): ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದರೆ ಜೀವಾವಧಿ ಶಿಕ್ಷೆ ವಿಧಿಸುವ ಹೊಸ ಸಾಮಾಜಿಕ ಜಾಲತಾಣ ನೀತಿ ಜಾರಿಗೆ ಉತ್ತರ ಪ್ರದೇಶ ಸರ್ಕಾರವು ಅನುಮೋದನೆ ನೀಡಿದೆ.
ಫೇಸ್ಬುಕ್, ಎಕ್ಸ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಪೋಸ್ಟ್ಗಳನ್ನು ನಿಯಂತ್ರಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ಈ ಕ್ರಮ ಜಾರಿಗೆ ತಂದಿದೆ. ಜಾರಿಯಾದ ಹೊಸ ನೀತಿಯ ಅಡಿಯಲ್ಲಿ, 'ದೇಶ ವಿರೋಧಿ' ವಿಷಯವನ್ನು ಪೋಸ್ಟ್ ಮಾಡುವುದು ಗಂಭೀರ ಅಪರಾಧವಾಗಿದೆ.
ಈ ರೀತಿಯ ಅಪರಾಧಕ್ಕಾಗಿ 3 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ ವರೆಗೂ ಕ್ರಮ ಇರುತ್ತದೆ. ಈ ಹಿಂದೆ, ಇಂತಹ ಕ್ರಮಗಳು ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯ ಸೆಕ್ಷನ್ 66ಇ ಮತ್ತು 66ಈ ಅಡಿಯಲ್ಲಿ ಕ್ರಮವಾಗಿ ಗೌಪ್ಯತೆ ಉಲ್ಲಂಘನೆ ಮತ್ತು ಸೈಬರ್ಟೆರರಿಸಂಗೆ ಸಂಬಂಧಪಟ್ಟಿತ್ತು.
ಇನ್ನು ಹೊಸ ನೀತಿಯ ಅನುಸಾರ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಸರ್ಕಾರದ ಯೋಜನೆಗಳು ಮತ್ತು ಸಾಧನೆ ಆಧಾರಿತ ವಿಷಯವನ್ನು ಹಂಚಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ.