ನವದೆಹಲಿ,ಮೇ26(Daijiworld News/AZM)::ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನದ ದಿನವೇ ರಾಜ್ಯ ಮೈತ್ರಿ ಸರ್ಕಾರ ಬೀಳಿಸಲು ಮುಹೂರ್ತ ಫಿಕ್ಸ್ ಮಾಡಲಾಗಿದೆ ಎನ್ನುವ ಸುದ್ದಿ ಬಿಜೆಪಿ ಪಾಳಾಯದಲ್ಲಿ ಕೇಳಿ ಬರುತ್ತಿದೆ.
ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲೇ ರಾಜ್ಯ ಮೈತ್ರಿ ಸರ್ಕಾರ ಉರುಳಿಸುವ ಮೂಹರ್ತವೂ ಫಿಕ್ಸ್ ಮಾಡಲಾಗಿದೆ ಎನ್ನುವ ನಿರೀಕ್ಷೆಯಲ್ಲಿ ರಾಜ್ಯ ಬಿಜೆಪಿ ಪಾಳಯವಿದೆ ಎನ್ನಲಾಗಿದೆ.
ಮೋದಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಕಾಂಗ್ರೆಸ್ನ ಅತೃಪ್ತ ಶಾಸಕರು ಹಾಗೂ ಪಕ್ಷೇತರ ಶಾಸಕರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗೆ ಬಹಿರಂಗವಾಗಿ ಸಮಾರಂಭದಲ್ಲಿ ಕಾಣಿಸಿ ಕೊಳ್ಳುವ ಮೂಲಕ ತಾವು ಬಿಜೆಪಿ ಸೇರುವ ಸಂದೇಶವನ್ನು ರವಾನಿಸಲಿದ್ದಾರೆ ಎನ್ನಲಾಗುತ್ತಿದೆ.
ಸಮಾರಂಭಕ್ಕೆ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಮತ್ತು ಪಕ್ಷೇತರ ಶಾಸಕರನ್ನು ಕರೆ ತರುವ ಪ್ರಯತ್ನವನ್ನು ರಾಜ್ಯ ಬಿಜೆಪಿ ನಡೆಸಿದೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ಬಿಜೆಪಿ ಪಾಳಯದ ಲೆಕ್ಕದಂತೆ ಅತೃಪ್ತ ಶಾಸಕರು ಮತ್ತು ಪಕ್ಷೇತರ ಶಾಸಕರು ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಂದರೆ ಅವತ್ತಿನಿಂದ ರಾಜ್ಯ ಸರ್ಕಾರಕ್ಕೆ ಕೌಂಟ್ ಡೌನ್ ಶುರುವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ನ ಪ್ರಮುಖ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಐದು ಅತೃಪ್ತ ಶಾಸಕರು ಈಗಾಗಲೇ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಇವರೆಲ್ಲಾ ಒಟ್ಟಾಗಿ ಮೋದಿ ಸಮಾರಂಭಕ್ಕೆ ಬಂದರೆ ಇನ್ನುಳಿದ ಅತೃಪ್ತ ಶಾಸಕರಿಗೆ ಪಕ್ಷ ಬಿಡಲು ಧೈರ್ಯ ಬರುತ್ತೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.